ಇಟಾನಗರ/ಗುವಾಹಟಿ: ಅರುಣಾಚಲ ಪ್ರದೇಶದಲ್ಲಿ ಭೂ ಕುಸಿತ ಮತ್ತು ಪ್ರವಾಹದಿಂದಾಗಿ ಇಬ್ಬರು ಪ್ರಾಣ ಕಳೆದುಕೊಂಡಿದ್ದು, ಅಸ್ಸೋಂನ ಮೂರು ಜಿಲ್ಲೆಗಳಲ್ಲಿ 33,200 ಜನರು ಪ್ರವಾಹದಿಂದ ಸಂಕಷ್ಟಕ್ಕೀಡಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈಶಾನ್ಯ ರಾಜ್ಯಗಳ ಕೆಲವು ಪ್ರದೇಶಗಳಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಸಾವಿರಾರು ಜನರು ಸಂಕಷ್ಟದಲ್ಲಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಇಟಾನಗರದಲ್ಲಿ, ಲೆಪಾ ರಾಡಾ ಜಿಲ್ಲೆಯ ಇಗೊ ನದಿಯಲ್ಲಿನ ಪ್ರವಾಹದಿಂದ ಬಾಟೊ ಡೋಯ್ ಮತ್ತು ಪೂರ್ಣ ಬಹದ್ದೂರ್ ಠಾಕೂರಿಯಾ ಎಂಬ ಇಬ್ಬರು ವ್ಯಕ್ತಿಗಳು ಕೊಚ್ಚಿ ಹೋಗಿದ್ದಾರೆ ಎಂದು ತಿಳಿಸಿದ್ದಾರೆ.
ಲೆಪಾ ರಾಡಾ, ಪಶ್ಚಿಮ ಸಿಯಾಂಗ್, ಸಿಯಾಂಗ್ ಮತ್ತು ಪೂರ್ವ ಸಿಯಾಂಗ್ ಜಿಲ್ಲೆಗಳಲ್ಲಿ ಸೇತುವೆಗಳು ಕೊಚ್ಚಿ ಹೋಗಿದ್ದು, ಆಸ್ತಿಪಾಸ್ತಿಗೆ ಅಪಾರ ಹಾನಿಯಾಗಿದೆ ಎಂದು ವರದಿಯಾಗಿದೆ. ಹಲವಾರು ನದಿಗಳು ಉಕ್ಕಿ ಹರಿಯುತ್ತಿದ್ದು, ಪ್ರವಾಹದಿಂದಾಗಿ ಈ ನಾಲ್ಕು ಜಿಲ್ಲೆಗಳಲ್ಲಿ ಹಾನಿ ಉಂಟಾಗಿದೆ ಎಂದು ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧಿಕಾರಿಗಳು ಹೇಳಿದ್ದಾರೆ.