ಮಧ್ಯಪ್ರದೇಶ: ರಾಜ್ಯದ ಕೆಲ ಭಾಗದಲ್ಲಿ ನಿನ್ನೆ ಸುರಿದ ಭಾರಿ ಗಾಳಿ ಮಳೆಗೆ ಸುಮಾರು 9 ಮಂದಿ ಸಾವನ್ನಪ್ಪಿದ್ದಾರೆ. ಅಷ್ಟೇ ಅಲ್ಲದೇ, ಅಪಾರ ಪ್ರಮಾಣದ ಹಾನಿಯುಂಟಾಗಿದ್ದು, ಅನೇಕ ಮನೆಗಳು ನೆಲಕಚ್ಚಿವೆ.
ಇಲ್ಲಿನ ಅನುಪುರ ಜಿಲ್ಲೆಯಲ್ಲಿ ಭಾರಿ ಗಾಳಿ ಮಳೆಯಿಂದಾಗಿ ಸಿಡಿಲು ಬಡಿದು ಐವರು ಸಾವನ್ನಪ್ಪಿದ್ದಾರೆ. ಅಷ್ಟೇ ಅಲ್ಲದೆ, ಡಿಯೋರಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಮೌಹರಿ ಗ್ರಾಮದಲ್ಲಿ ಕೊಟ್ಟಿಗೆಯಲ್ಲಿ ನಿಂತಿದ್ದ ಮೂವರಿಗೆ ಸಿಡಿಲು ಬಡಿದಿದೆ. ಪರಿಣಾಮ ಸ್ಥಳದಲ್ಲೇ ಶ್ಯಾಮಾ ಬಾಯಿ ಮತ್ತು ಕೃಷ್ಣಪಾಲ್ ಸಿಂಗ್ ಎಂಬವರು ಸಾವನ್ನಪ್ಪಿದ್ದಾರೆ. ಗಾಯಗೊಂಡ ಪುಷ್ಪಲತಾ ದೇವಿ ಎಂಬಾಕೆಯನ್ನು ಆಸ್ಪತ್ರೆಗೆ ರವಾನಿಸಿದರೂ ಮಾರ್ಗ ಮಧ್ಯೆ ಅಸುನೀಗಿದ್ದಾರೆ.
ಇನ್ನು ಮೌಹರಿ ಗ್ರಾಮದಿಂದ 1 ಕಿ.ಮೀ ದೂರದಲ್ಲಿರುವ ರಾಜ್ಬಂಧ್ ಕೇಶ್ವಾಹಿ ಗ್ರಾಮದಲ್ಲಿ ಒಬ್ಬ ಸಾವನ್ನಪ್ಪಿದ್ದಾರೆ. ಹೊಲದಲ್ಲಿ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ಸಿಡಿಲು ಬಡಿದಿದ್ದು, ಬೆಂಚು ಸಿಂಗ್ ಗೊಂಡ್ ಮೃತಪಟ್ಟಿದ್ದಾರೆ.
ಘಟನೆ ಕುರಿತು ಮಾಹಿತಿ ತಿಳಿದ ಪೊಲೀಸರು ತಕ್ಷಣ ಸ್ಥಳಕ್ಕೆ ಆಗಮಿಸಿ, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಬಳಿಕ ಕುಟುಂಬಸ್ಥರಿಗೆ ಹಸ್ತಾಂತರಿಸಿದ್ದಾರೆ.