ರಾಂಚಿ (ಜಾರ್ಖಂಡ್): ಪೀಪಲ್ಸ್ ಲಿಬರೇಶನ್ ಫ್ರಂಟ್ ಆಫ್ ಇಂಡಿಯಾದ (ಪಿಎಲ್‌ಎಫ್‌ಐ) ಐದು ನಕ್ಸಲರನ್ನು ಪೊಲೀಸರು ಬಂಧಿಸಿದ್ದಾರೆ ಮತ್ತು ಅವರಿಂದ ಪಿಸ್ತೂಲ್ ಸೇರಿದಂತೆ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಂಡಿದ್ದಾರೆ.
ಬಂಧಿತ ನಕ್ಸಲರಲ್ಲಿ ಲಾಡೆನ್ ಮತ್ತು ತುಳಸಿ ಪಹಾನ್ ಸೇರಿದ್ದಾರೆ. ಪಿಎಲ್‌ಎಫ್‌ಐ ಜಾರ್ಖಂಡ್‌ನ ನಕ್ಸಲೈಟ್‌ಗಳ ಎರಡನೇ ಅತಿದೊಡ್ಡ ಗುಂಪಾಗಿದ್ದು, ಪೊಲೀಸ್ ಕ್ರಮಗಳ ಹೊರತಾಗಿಯೂ ತಮ್ಮ ಅಕ್ರಮ ಚಟುವಟಿಕೆಗಳನ್ನು ಮುಂದುವರಿಸುತ್ತಿದ್ದಾರೆ.
ಪಿಎಲ್‌ಎಫ್‌ಐನ ಕಮಾಂಡರ್ ತುಳಸಿ ಪಹಾನ್ನನ್ನು ನವೆಂಬರ್ 16 ರಂದು ಪೊಲೀಸರು ಬಂಧಿಸಿ, ರಹಸ್ಯ ಸ್ಥಳದಲ್ಲಿ ವಿಚಾರಣೆ ನಡೆಸುತ್ತಿದ್ದಾರೆ. ರಾಂಚಿ ಪೊಲೀಸರು ತುಳಸಿ ಪಹಾನ್ ಮತ್ತು ಆತನ ಐವರು ಒಡನಾಡಿಗಳನ್ನು ಉನ್ನತ ರಾಜಕೀಯ ನಾಯಕನನ್ನು ಹತ್ಯೆ ಮಾಡಲು ಸಂಚು ರೂಪಿಸಿದ್ದ ಹಿನ್ನೆಲೆ ಐದು ವರ್ಷಗಳ ಹಿಂದೆ ಬಂಧಿಸಿ ಜೈಲಿಗೆ ಕಳುಹಿಸಿದ್ದರು. ಜೈಲಿನಿಂದ ಬಿಡುಗಡೆಯಾದ ನಂತರ ಮತ್ತೆ ಅಕ್ರಮ ಚಟುವಟಿಕೆಯಲ್ಲಿ ತೊಡಗಿದ್ದಾರೆ. ಕೆಲವು ಉದ್ಯಮಿಗಳಿಗೆ ಪಿಎಲ್‌ಎಫ್‌ಐನಿಂದ ಬೆದರಿಕೆ ದೂರವಾಣಿ ಕರೆಗಳು ಬಂದಿದ್ದು, ಇದರ ಹಿಂದೆ ತುಳಸಿ ಪಹಾನ್ ಇದ್ದಾನೆ ಎಂದು ಆರೋಪಿಸಲಾಗಿದೆ.
ಪಿಎಲ್‌ಎಫ್‌ಐ ಎಂದರೇನು?
ಪೀಪಲ್ಸ್ ಲಿಬರೇಶನ್ ಫ್ರಂಟ್ ಆಫ್ ಇಂಡಿಯಾ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾದ ವಿಭಜಕ ಗುಂಪು. 2007 ರಲ್ಲಿ ದಿನೇಶ್ ಗೋಪ್ ರಚಿಸಿದರು. ಅದೇ ವರ್ಷ ಮಾವೋವಾದಿ ನಾಯಕ ಮಾಸಿ ಚರಣ್ ಪುರ್ತಿ ಮತ್ತು ಇತರ ಅನೇಕ ನಕ್ಸಲರು ಪಿಎಲ್ಎಫ್ಐಗೆ ಸೇರಿದ್ದರು. ನಂತರ ಚರಣ್ ಪುರ್ತಿಯನ್ನು ಪೊಲೀಸರು ಬಂಧಿಸಿದ್ದರು. ಇದಾದ ಬಳಿಕ ಅನೇಕ ಮಾವೋವಾದಿಗಳು ಈ ಗುಂಪಿಗೆ ಸೇರಿಕೊಳ್ಳುವುದರೊಂದಿಗೆ ಪಿಎಲ್‌ಎಫ್‌ಐ ವಿಸ್ತರಿಸಿತು. ರಾಂಚಿ, ಖುಂಟಿ, ಸಿಮ್ಡೆಗಾ, ಗುಮ್ಲಾದ ಗ್ರಾಮೀಣ ಪ್ರದೇಶಗಳಲ್ಲಿ ಪಿಎಲ್‌ಎಫ್‌ಐ ಪ್ರಬಲವಾಗಿದೆ. ಅಲ್ಲದೇ ಇದು ವಿವಿಧ ಜಿಲ್ಲೆಗಳಿಗೆ ಪ್ರದೇಶ ಕಮಾಂಡರ್‌ಗಳನ್ನು ನೇಮಿಸಿದ್ದು, ನೆರೆರಾಜ್ಯಗಳಾದ ಬಿಹಾರ, ಒಡಿಶಾದಲ್ಲೂ ನುಸುಳಿದೆ. 2019 ರಲ್ಲಿ ನಡೆದ ಪೊಲೀಸ್ ಎನ್‌ಕೌಂಟರ್‌ನಲ್ಲಿ ಇಬ್ಬರು ಉನ್ನತ ನಕ್ಸಲ್ ನಾಯಕರು ಮತ್ತು ಹತ್ತು ಮಂದಿ ಕೇಡರ್‌ಗಳು ಕೊಲ್ಲಲ್ಪಟ್ಟ ನಂತರ ಪಿಎಲ್‌ಎಫ್‌ಐ ತನ್ನ ‘ಬಿಹಾರ ಲಿಂಕ್’ ನಿಂದ ಬೆಂಬಲ ಪಡೆಯುತ್ತಿದೆ. ಬಿಹಾರದ ಪರಾರಿಯಾಗಿದ್ದ ಕೆಲವು ಕುಖ್ಯಾತ ಅಪರಾಧಿಗಳು ಪಿಎಲ್‌ಎಫ್‌ಐಗೆ ಸೇರ್ಪಡೆಗೊಂಡಿದ್ದಾರೆ.
ಈ ವರ್ಷ 135 ನಕ್ಸಲರ ಬಂಧನ:
2018 ರ ಅವಧಿಯಲ್ಲಿ ಪಿಎಲ್‌ಎಫ್‌ಐನ 122 ಸದಸ್ಯರನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಐಜಿ ಸಾಕೇತ್ ಸಿಂಗ್ ಇಟಿವಿ ಭಾರತ್‌ಗೆ ತಿಳಿಸಿದ್ದಾರೆ. 2019 ರಲ್ಲಿ 81 ಮತ್ತು ಈ ವರ್ಷದ ಅಕ್ಟೋಬರ್ ವೇಳೆಗೆ 135 ನಕ್ಸಲರನ್ನು ಬಂಧಿಸಲಾಗಿದೆ. ಆದರೆ, ಪಿಎಲ್‌ಎಫ್‌ಐ ಮುಖ್ಯಸ್ಥ ದಿನೇಶ್ ಗೋಪ್ ಪರಾರಿಯಾಗಿದ್ದಾನೆ. ದಿನೇಶ್ ಗೋಪ್ನ ಯಾವುದೇ ಫೋಟೋಗಳು ಪೊಲೀಸರ ಬಳಿ ಇಲ್ಲ, ಹಾಗಾಗಿ ಆತನನ್ನು ಪತ್ತೆ ಹಚ್ಚುವುದು ಕಷ್ಟಕರವಾಗಿದೆಯೆಂದು ತಿಳಿಸಿದರು.