ವಾರಂಗಲ್ (ತೆಲಂಗಾಣ): ತೆಲಂಗಾಣದಲ್ಲಿ ಹೊಸ ಬಗೆಯ ಕೋವಿಡ್‌ನ ಮೊದಲ ಪ್ರಕರಣ ಪತ್ತೆಯಾಗಿದೆ. ಡಿಸೆಂಬರ್ 10ರಂದು ಯುಕೆಯಿಂದ ತೆಲಂಗಾಣಕ್ಕೆ ಆಗಮಿಸಿದ ವ್ಯಕ್ತಿಗೆ ರೂಪಾಂತರಗೊಂಡ ಕೊರೊನಾ ಸೋಂಕು ಇರುವುದು ಪತ್ತೆಯಾಗಿದೆ. ಆದರೆ, ಆರೋಗ್ಯ ಇಲಾಖೆ ಅಧಿಕಾರಿಗಳು ಇದನ್ನು ಇನ್ನೂ ದೃಢೀಕರಿಸಿಲ್ಲ.
ಮಾಹಿತಿಯ ಪ್ರಕಾರ, ವಾರಂಗಲ್‌ನ ವ್ಯಕ್ತಿಯೊಬ್ಬರಿಗೆ ಡಿಸೆಂಬರ್ 16ರಂದು ಕೋವಿಡ್ ರೋಗಲಕ್ಷಣಗಳು ಇರುವುದು ಪತ್ತೆಯಾಯಿತು. ಬಳಿಕ ಅವರನ್ನು ಪರೀಕ್ಷೆಗೆ ಒಳಪಡಿಸಿದಾಗ ಸೋಂಕು ತಗುಲಿರುವುದು ಗೊತ್ತಾಗಿದೆ. ಸದ್ಯ ಅವರು ವಾರಂಗಲ್‌ನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಆರೋಗ್ಯ ಇಲಾಖೆಯ ಅಧಿಕಾರಿಗಳು ಸೋಂಕಿತ ವ್ಯಕ್ತಿಯ ಸಂಪರ್ಕಕ್ಕೆ ಬಂದವರ ಬಗ್ಗೆ ಮಾಹಿತಿ ಕಲೆ ಹಾಕಿ ಅವರನ್ನು ಸಹ ಕೋವಿಡ್ ಪರೀಕ್ಷೆಗೆ ಒಳಪಡಿಸಿದಾಗ 71 ವರ್ಷದ ಅವರ ತಾಯಿಗೂ ಸೋಂಕಿರುವುದು ದೃಢಪಟ್ಟಿತು. ಸದ್ಯ ಅವರ ಮಾದರಿಗಳನ್ನು ಪರೀಕ್ಷೆಗೆ ಕಳುಹಿಸಲಾಗಿದೆ.
ಓದಿ: ಹಲವು ತಿಂಗಳ ಬಳಿಕ ದೇಶದಲ್ಲಿ ಅತಿಕಡಿಮೆ ಕೋವಿಡ್ ಕೇಸ್ ಪತ್ತೆ; ಆದ್ರೂ ಎಚ್ಚರ ಅಗತ್ಯ
ತೆಲಂಗಾಣ ಆರೋಗ್ಯ ಇಲಾಖೆ ಕೊರೊನಾ ತಡೆಗೆ ಎಚ್ಚರವಹಿಸಿದೆ. ವೈರಸ್ ಹರಡುವುದನ್ನು ತಡೆಗಟ್ಟಲು ಪತ್ತೆ ಹಚ್ಚುವ, ಪರೀಕ್ಷಿಸುವ ಮತ್ತು ಚಿಕಿತ್ಸೆ ನೀಡುವ ಕ್ರಮವನ್ನು ಸರ್ಕಾರ ಅನುಸರಿಸುತ್ತಿದೆ ಎಂದು ಸಾರ್ವಜನಿಕ ಆರೋಗ್ಯ ರಾಜ್ಯ ನಿರ್ದೇಶಕ ಜಿ. ಶ್ರೀನಿವಾಸ ರಾವ್ ಹೇಳಿದ್ದಾರೆ.
ತೆಲಂಗಾಣ ರಾಜ್ಯಪಾಲ ತಮಿಳುಸಾಯಿ ಸೌಂಡರಾರಾಜನ್, ವಿದೇಶದಲ್ಲಿ ವೇಗವಾಗಿ ಹರಡುತ್ತಿರುವ ಹೊಸ ಪ್ರಬೇಧದ ಕೋವಿಡ್-19 ಬಗ್ಗೆ ಜನರು ಭಯಭೀತರಾಗುವ ಬದಲು ಎಲ್ಲಾ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು ಎಂದು ತಿಳಿಸಿದ್ದಾರೆ.