ಮುಂಬೈ: ದಕ್ಷಿಣ ಮುಂಬೈನ ನೇಪಾನ್ಸೀ ರಸ್ತೆಯಲ್ಲಿರುವ ಹನ್ನೊಂದು ಅಂತಸ್ತಿನ ಕಟ್ಟಡ ಒಂದರಲ್ಲಿ ಇಂದು ಮುಂಜಾನೆ ಬೆಂಕಿ ಕಾಣಿಸಿಕೊಂಡಿದೆ ಎಂದು ಅಗ್ನಿಶಾಮಕ ಅಧಿಕಾರಿ ತಿಳಿಸಿದ್ದಾರೆ.
ಅಗ್ನಿ ಅವಘಡದಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಇಬ್ಬರು ಮಹಿಳೆಯರು ಕಟ್ಟಡದ ಮೇಲಿನ ಮಹಡಿಗಳಲ್ಲಿ ಸಿಲುಕಿಕೊಂಡಿದ್ದರು. ಅವರನ್ನು ರಕ್ಷಿಸಲಾಗಿದೆ ಎಂದರು.
ಫ್ಲ್ಯಾಟ್‌ನ ಆರನೇ ಮಹಡಿಯಲ್ಲಿ ಇಂದು ಮುಂಜಾನೆ 4.40ರ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿದೆ. ಎರಡು ಕೋಣೆಗಳು, ವಿದ್ಯುತ್ ವೈರಿಂಗ್, ಹಾಸಿಗೆ, ಪೀಠೋಪಕರಣಗಳು ಮತ್ತು ಬಟ್ಟೆ ಸುಟ್ಟು ಹೋಗಿವೆ ಎಂದು ಅಧಿಕಾರಿ ಹೇಳಿದರು.
ನಾಲ್ಕು ಗಂಟೆಗಳ ಕಾರ್ಯಾಚರಣೆಯ ಬಳಿಕ ಬೆಂಕಿ ನಂದಿಸಲಾಗಿದೆ. ಸ್ಥಳದಲ್ಲಿ ಕೂಲಿಂಗ್ ಕಾರ್ಯಾಚರಣೆ ನಡೆಯುತ್ತಿದ್ದು, ಅಗ್ನಿ ಅವಘಡದ ಕಾರಣ ಪತ್ತೆಹಚ್ಚಲಾಗುತ್ತಿದೆ ಎಂದರು.