ನವದೆಹಲಿ : ಜಮ್ಮು ಮತ್ತು ಕಾಶ್ಮೀರದ ಹಂದ್ವಾರಾ ಪ್ರದೇಶದಲ್ಲಿ ಭಯೋತ್ಪಾದಕರೊಂದಿಗಿನ ಎನ್ಕೌಂಟರ್ನಲ್ಲಿ ಭಾರತೀಯ ಸೇನಾ ಕರ್ನಲ್ ಸಾವನ್ನಪ್ಪಿದ ನಂತರ ಪಾಕಿಸ್ತಾನದ ವಾಯುಪಡೆಯು ತನ್ನ ಭೂಪ್ರದೇಶದ ಮೇಲೆ ವೈಮಾನಿಕ ಕಾರ್ಯಾಚರಣೆಯನ್ನು ಹೆಚ್ಚಿಸಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.
ಹಂದ್ವಾರಾ ಎನ್ಕೌಂಟರ್ ನಂತರ ಪಾಕ್ ತನ್ನ ಗಡಿಗೆ ಸಮೀಪವಿರುವ ತನ್ನ ಭೂಪ್ರದೇಶದಲ್ಲಿ ಫೈಟರ್ ಏರ್ಕ್ರಾಫ್ಟ್ಗಳಾದ ಎಫ್-16, ಜೆಎಫ್-17 ಸೇರಿದಂತೆ ಹಲವಾರು ಯುದ್ಧ ವಿಮಾನಗಳು ಗಸ್ತು ತಿರುಗುತ್ತಿವೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಭಾರತದಲ್ಲಿ ನಡೆಯುತ್ತಿರುವ ಹಿಂಸಾಕೃತ್ಯಗಳ ಹಿಂದೆ ಪಾಕಿಸ್ತಾನವಿದೆ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿದ್ದ ಅಲ್ಲಿನ ಪ್ರಧಾನಿ ಇಮ್ರಾನ್ ಖಾನ್ ''ಇದೊಂದು ಆಧಾರರಹಿತ ಆರೋಪ, ಪಾಕ್ ಗಡಿ ನಿಯಂತ್ರಣ ರೇಖೆ ದಾಟಿ ಭಾರತದ ಒಳ ನುಸುಳುತ್ತಿದೆ ಎಂಬುದೂ ಸುಳ್ಳು'' ಎಂದು ಟ್ವೀಟ್ ಮಾಡಿದ್ದರು.
ಕಾಶ್ಮೀರದಲ್ಲಿ ಭಯೋತ್ಪಾದನಾ ಚಟುವಟಿಕೆಗಳು ಹೆಚ್ಚಾದ ಕಾರಣದಿಂದ ಭಾರತ ಯಾವಾಗ ಬೇಕಾದರೂ ಪ್ರತೀಕಾರ ತೀರಿಸಿಕೊಳ್ಳಬಹುದೆಂಬ ಕಾರಣದಿಂದ ಪಾಕ್ ಈಗಾಗಲೇ ವೈಮಾನಿಕ ಗಸ್ತನ್ನು ಹೆಚ್ಚಿಸಿಕೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕೆಲ ವರ್ಷದ ಹಿಂದೆ ಭಯೋತ್ಪಾದನಾ ದಾಳಿಗೆ ಭಾರತ ಪ್ರತೀಕಾರ ತೀರಿಸಿಕೊಂಡಿತ್ತು.