ಫತೇಪುರ್(ಉತ್ತರಪ್ರದೇಶ): ಕಳೆದ ಕೆಲ ದಿನಗಳ ಹಿಂದೆ 20 ವರ್ಷದ ಯುವತಿಯೋರ್ವಳ ಮೇಲೆ ನಡೆದಿದ್ದ ಅತ್ಯಾಚಾರ ಹಾಗೂ ಕೊಲೆ ಯತ್ನ ಪ್ರಕರಣದ ಸಂತ್ರಸ್ತೆ ಇದೀಗ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿರುವ ಘಟನೆ ನಡೆದಿದೆ. ಉತ್ತರ ಪ್ರದೇಶದ ಫತೇಪುರ್ ಜಿಲ್ಲೆಯಲ್ಲಿ ಈ ಅಮಾನವೀಯ ಘಟನೆ ನಡೆದಿದೆ.
ಡಿಸೆಂಬರ್ 14ರಂದು ಮಹಿಳೆ ಮನೆಯಲ್ಲಿದ್ದ ವೇಳೆ ಆಕೆಯ ಮೇಲೆ ನೆರೆಮನೆಯ ವ್ಯಕ್ತಿಯೇ ಅತ್ಯಾಚಾರಗೈದು ನಂತರ ಸೀಮೆಎಣ್ಣೆ ಸುರಿದು ಕೊಲೆ ಮಾಡುವ ಪ್ರಯತ್ನ ನಡೆಸಿದ್ದ. ತಕ್ಷಣವೇ ಆಕೆಯನ್ನು ಕಾನ್ಪುರದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಆಕೆಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಇದೀಗ ಚಿಕಿತ್ಸೆ ಫಲಕಾರಿಯಾಗದೆ ಯುವತಿ ಮೃತಪಟ್ಟಿದ್ದಾಳೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಸಂತ್ರಸ್ತೆಯ ಸಹೋದರ ದೂರು ದಾಖಲಿಸಿದ್ದರು. ಈ ದೂರಿನ ಆಧಾರದ ಮೇಲೆ ಡಿಸೆಂಬರ್ 15ರಂದು ಆರೋಪಿಯನ್ನು ಪೊಲೀಸರು ಬಂಧಿಸಿದ್ದರು.
ಇದಕ್ಕೂ ಮುಂಚಿತವಾಗಿ ಉತ್ತರಪ್ರದೇಶದ ಉನ್ನಾವೋದಲ್ಲಿ ಇದೇ ರೀತಿಯ ಹೇಯ ಘಟನೆ ನಡೆದಿತ್ತು. ಅತ್ಯಾಚಾರಕ್ಕೊಳಗಾಗಿದ್ದ ಯುವತಿ ಕೋರ್ಟ್ಗೆ ಆಗಮಿಸುತ್ತಿದ್ದ ವೇಳೆ ಆಕೆಯ ಮೇಲೆ ಪೆಟ್ರೋಲ್ ಸುರಿದು ಕೊಲೆಯತ್ನ ನಡೆಸಿದ್ದು ಬಳಿಕ ಆಕೆ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಳು. ತೆಲಂಗಾಣದಲ್ಲೂ ದುಷ್ಕರ್ಮಿಗಳು ಇನ್ನೂ ಘೋರವಾದ ಕೃತ್ಯ ಎಸಗಿದ್ದು, ಪಶುವೈದ್ಯೆ ಮೇಲೆ ಸಾಮೂಹಿಕ ಅತ್ಯಾಚಾರಗೈದು ಬೆಂಕಿ ಹಾಕಿ ಸುಟ್ಟು ಹಾಕಿ ಪೈಶಾಚಿಕತೆ ಮೆರೆದಿದ್ದರು.