ನವದೆಹಲಿ : ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಮೂರು ನೂತನ ಕೃಷಿ ಕಾನೂನುಗಳನ್ನು ವಿರೋಧಿಸಿ ರಾಷ್ಟ್ರ ರಾಜಧಾನಿಯ ಸಿಂಘು, ಟಿಕ್ರಿ ಮತ್ತು ಗಾಜಿಪುರ್ ಗಡಿಗಳಲ್ಲಿ ರೈತರು ಪ್ರತಿಭಟನೆ ನಡೆಸಲು ಆರಂಭಿಸಿ ಇಂದಿಗೆ 30 ದಿನಗಳಾಗಿವೆ.
ರೈತರ ಕೂಗಿಗೆ ದನಿಗೂಡಿಸಿರುವ ಪ್ರತಿಪಕ್ಷಗಳು : ನೂತನ ಕೃಷಿ ಕಾನೂನುಗಳನ್ನು ರದ್ದುಪಡಿಸಲು ಸಂಸತ್ತಿನ ವಿಶೇಷ ಜಂಟಿ ಅಧಿವೇಶನ ಕರೆಯಬೇಕು ಎಂದು ಆಗ್ರಹಿಸಿರುವ ಕಾಂಗ್ರೆಸ್ ಪಕ್ಷದ ನಿಯೋಗ, ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದೆ. ಕಾಂಗ್ರೆಸ್ ನಿಯೋಗ ದೆಹಲಿಯ ಕಾಂಗ್ರೆಸ್ ಕಚೇರಿಯಿಂದ ಹೊರಟು ರಾಷ್ಟ್ರಪತಿ ಭವನ ತಲುಪುವಷ್ಟರಲ್ಲಿ ಪೊಲೀಸರು ಹಲವು ಕೈ ನಾಯಕರನ್ನು ವಶಕ್ಕೆ ಪಡೆದರು.
ಕಾಲ್ನಡಿಗೆಯಲ್ಲಿ ಹೊರಟಿದ್ದ ಪ್ರಿಯಾಂಕಾ ಗಾಂಧಿ ವಾದ್ರಾ ಸೇರಿದಂತೆ ಕಾಂಗ್ರೆಸ್‌ನ ಹಲವು ಮುಖಂಡರು ಮತ್ತು ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದರು. ಈ ನಾಯಕರನ್ನು ಕೆಲವು ಗಂಟೆಗಳ ನಂತರ ಬಿಡುಗಡೆಗೊಳಿಸಲಾಯಿತು. ಬಳಿಕ ಕೆಲವು ನಾಯಕರಿಗೆ ಮಾತ್ರ ರಾಷ್ಟ್ರಪತಿ ಅವರನ್ನು ಭೇಟಿ ಮಾಡಲು ಅವಕಾಶ ಕಲ್ಪಿಸಲಾಯಿತು.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ರಾಜ್ಯಸಭೆ ಪ್ರತಿಪಕ್ಷ ನಾಯಕ ಗುಲಾಂ ನಬಿ ಆಜಾದ್, ಲೋಕಸಭೆ ಕೈ ನಾಯಕ ಅಧಿರ್ ರಂಜನ್ ಚೌಧುರಿ ಮಾತ್ರ ರಾಷ್ಟ್ರಪತಿಗಳನ್ನು ಭೇಟಿ ಮಾಡಿ, ರೈತರ ತೀವ್ರ ವಿರೋಧಕ್ಕೆ ಒಳಗಾಗಿರುವ ಈ ಮೂರು ಕೃಷಿ ಕಾನೂನುಗಳನ್ನು ರದ್ದುಪಡಿಸುವಂತೆ ಆಗ್ರಹಿಸಿ ಎರಡು ಕೋಟಿ ರೈತರು ಸಹಿ ಮಾಡಿದ್ದ ಮನವಿ ಪತ್ರವನ್ನು ರಾಷ್ಟ್ರಪತಿಗಳಿಗೆ ನೀಡಿದರು.
ರೈತರಿಗೆ ಮತ್ತೆ ಕೇಂದ್ರದ ಪತ್ರ : ಕೃಷಿ ಸುಧಾರಣಾ ಕಾನೂನುಗಳ ಬಗ್ಗೆ ಚರ್ಚಿಸಲು ಬರುವಂತೆ ಕೋರಿ 40 ರೈತ ಮುಖಂಡರಿಗೆ ಕೇಂದ್ರ ಸರ್ಕಾರ ಮತ್ತೆ ಪತ್ರ ಬರೆದಿದೆ. ಪ್ರತಿಭಟನೆ ಕೊನೆಗೊಳಿಸುವ ಉದ್ದೇಶದಿಂದ ಮುಕ್ತ ಮನಸ್ಸಿನಿಂದ ಎಲ್ಲಾ ಸಮಸ್ಯೆಗಳ ಬಗ್ಗೆ ಮಾತುಕತೆ ನಡೆಸಲು ಸಿದ್ಧ. ಆದರೆ, ಈ ವೇಳೆ ಕನಿಷ್ಟ ಬೆಂಬಲ ಬೆಲೆಯ ಬಗ್ಗೆ ಚರ್ಚೆ ಅಸಾಧ್ಯ.
ಕನಿಷ್ಟ ಬೆಂಬ ಬೆಲೆ ಮುಂದುವರೆಯುತ್ತದೆ. ಆದರೆ, ಅದನ್ನು ಕಾನೂನು ಬದ್ಧಗೊಳಿಸುವುದು ಸಾಧ್ಯವಿಲ್ಲ. ದಿನಾಂಕ, ಸಮಯವನ್ನು ನಿಗದಿ ಮಾಡಿ, ಸಮಸ್ಯೆಗಳ ಬಗ್ಗೆ ಮಾಹಿತಿ ನೀಡಿ ಚರ್ಚೆ ಮಾಡೋಣ ಎಂದು ಕೃಷಿ ಸಚಿವಾಲಯದ ಜಂಟಿ ನಿರ್ದೇಶಕ ವಿವೇಕ್ ಅಗರ್ವಾಲ್ ರೈತರಿಗೆ ಪತ್ರ ಬರೆದಿದ್ದಾರೆ.
ಇದನ್ನೂ ಓದಿ: ಪ್ರತಿಭಟನಾನಿರತ ರೈತರಿಗೆ ಉಚಿತ ವಸ್ತುಗಳ ಪೂರೈಸಲು ಕಿಸಾನ್ ಮಾಲ್ ಸ್ಥಾಪಿಸಿದ ಖಲ್ಸಾ ಏಡ್
ರೈತರ ಪ್ರತಿಭಟನೆಯಲ್ಲಿ ಕೆನಡಾ ವ್ಯಕ್ತಿ ಭಾಗಿ : ಕಳೆದ ಒಂದು ತಿಂಗಳಿಂದ ದೆಹಲಿ ಗಡಿಯಲ್ಲಿ ಬೃಹತ್ ಪ್ರತಿಭಟನೆ ನಡೆಸುತ್ತಿರುವ ರೈತರಿಗೆ ಬೆಂಬಲ ನೀಡಿರುವ ಭಾರತ ಮೂಲದ ಕೆನಡಾ ನಿವಾಸಿಯೊಬ್ಬರು, ಪ್ರತಿಭಟನೆಯಲ್ಲಿ ಭಾಗಿಯಾಗಿದ್ದಾರೆ. ಆಂದೋಲನದಲ್ಲಿ ಭಾಗವಹಿಸುವ ಉದ್ದೇಶದಿಂದ ಕಳೆದ 30 ವರ್ಷಗಳಿಂದ ಟೊರೊಂಟೊದಲ್ಲಿ ಉದ್ಯಮಿಯಾಗಿರುವ ಗುರ್ಬಕ್ಷ್ ಸಿಂಗ್, ದೀರ್ಘಕಾಲದವರೆಗೆ ಭಾರತದಲ್ಲಿಯೇ ಉಳಿಯಲಿದ್ದಾರಂತೆ.
ಕಿಸಾನ್ ಏಕತಾ ಮೋರ್ಚಾ : ದೇಶದ 450ಕ್ಕೂ ಹೆಚ್ಚು ರೈತ ಸಂಘಟನೆಗಳು ಒಟ್ಟಾಗಿ ಆಯೋಜಿಸಿದ್ದ ‘ದೆಹಲಿ ಚಲೋ’ ಪ್ರತಿಭಟನಾ ಮೆರವಣಿಗೆ ದೆಹಲಿ ಗಡಿಯಲ್ಲಿ ತಡೆದು ನಿಲ್ಲಿಸಲಾಯಿತು. ಆ ಬಳಿಕ ದೇಶದ ಇನ್ನಷ್ಟು ರೈತ ಸಂಘಟನೆಗಳು ಇವರ ಹೋರಾಟಕ್ಕೆ ಬೆಂಬಲ ನೀಡಿದರು.
ಪ್ರಸ್ತುತ ಕೃಷಿ ಕಾನೂನು ವಿರೋಧಿ ಹೋರಾಟಕ್ಕೆ ಬೆಂಬಲ ನೀಡಿರುವ ಎಲ್ಲಾ ಸಂಘಟನೆಗಳು ಸೇರಿ ‘ಕಿಸಾನ್ ಏಕತಾ ಮೋರ್ಚಾ’ ಎಂಬ ಒಕ್ಕೂಟ ರಚಿಸಿಕೊಂಡಿದ್ದು, ಅದರಡಿಯೇ ಪ್ರತಿಭಟನೆ ಮುಂದುವರಿದಿದೆ. ಕಳೆದ ಒಂದು ತಿಂಗಳಿನಿಂದ ದೆಹಲಿಯ ಐದು ಪ್ರಮುಖ ಗಡಿಗಳಲ್ಲಿ 2 ಲಕ್ಷಕ್ಕೂ ಅಧಿಕ ರೈತರು ಕೇಂದ್ರದ ವಿರುದ್ಧ ತಮ್ಮ ಆಂದೋಲನ ಮುಂದುವರೆಸಿದ್ದಾರೆ.
ಸೈಕಲ್‌ನಲ್ಲಿ ಪ್ರತಿಭಟನಾ ಸ್ಥಳಕ್ಕೆ ಬಂದ ರೈತ : ಪಂಜಾಬ್ ರೈತರು ನಡೆಸುತ್ತಿರುವ ಈ ಪ್ರತಿಭಟನೆಗೆ ಬೆಂಬಲಿಸಲು ಪಂಜಾಬ್ನ ಸುಖಬಿಲ್ ಬಾಜ್ವಾ ಎಂಬ ರೈತರೊಬ್ಬರು ಸುಮಾರು 370 ಕಿ.ಮೀ ದೂರವನ್ನು ಸೈಕಲ್ ಮೂಲಕ ಕ್ರಮಿಸಿ, ಪ್ರತಿಭಟನೆಯಲ್ಲಿ ಭಾಗಿಯಾಗಿದ್ದಾರೆ.
ಇದನ್ನೂ ಓದಿ: ರೈತರ ದೆಹಲಿ ಚಲೋಗೆ ನನ್ನ ಸಂಪೂರ್ಣ ಬೆಂಬಲ ಇದೆ; ಅಣ್ಣಾ ಹಜಾರೆ ಘೋಷಣೆ
ಸಾಮಾಜಿಕ ಜಾಲತಾಣಗಳಲ್ಲೂ ಆಂದೋಲನ : ರೈತರ ಈ ಪ್ರತಿಭಟನೆಗೆ ಸಾಮಾಜಿಕ ಜಾಲತಾಣದಲ್ಲೂ ಭಾರೀ ಬೆಂಬಲ ವ್ಯಕ್ತವಾಗಿದೆ. ಫೇಸ್‌ಬುಕ್, ಟ್ವಿಟರ್, ಇನ್‌ಸ್ಟಾಗ್ರಾಂ, ಯೂಟ್ಯೂಬ್‌ನಲ್ಲಿ ಕಿಸಾನ್ ಏಕತಾ ಮೋರ್ಚಾ ಹೆಸರಿನಲ್ಲಿ ಖಾತೆ ತೆರೆಯಲಾಗಿದೆ. ಲಕ್ಷಾಂತರ ಮಂದಿ ಈ ಖಾತೆಯನ್ನು ಫಾಲೋ ಮಾಡುತ್ತಿದ್ದಾರೆ. ಈ ಖಾತೆಗಳ ಮೂಲಕ ರೈತ ನಾಯಕರು, ರೈತರಿಗೆ ಹೋರಾಟದ ಬಗ್ಗೆ ಸೂಚನೆ ನೀಡುತ್ತಿದ್ದಾರೆ. ಕಾಯ್ದೆಗಳ ಬಗ್ಗೆ ಅರಿವು ಮೂಡಿಸಲು ಈ ಖಾತೆಗಳನ್ನು ಬಳಸಲಾಗುತ್ತಿದೆ.
ಹೊಸ ಕೃಷಿ ಕಾನೂನು ಹಿಂಪಡೆದ್ರೆ ಹೋರಾಟ : ಒಂದೆಡೆ 30 ದಿನಗಳಿಂದ ನೂತನ ಕೃಷಿ ಕಾನೂನುಗಳನ್ನು ವಿರೋಧಿಸಿ ಹೋರಾಟ ನಡೆಯುತ್ತಿದ್ದರೆ, ಇತ್ತ ಹೊಸ ಕೃಷಿ ಕಾನೂನುಗಳು ರೈತರಿಗೆ ಪ್ರಯೋಜನಕಾರಿಯಾಗಿವೆ. ಇವುಗಳನ್ನು ಹಿಂಪಡೆಯದಂತೆ ಕಿಸಾನ್ ಸೇನೆಯು ಸರ್ಕಾರವನ್ನು ಕೋರಿದೆ.
ಕಿಸಾನ್ ಸೇನಾ ಬ್ಯಾನರ್ ಅಡಿಯಲ್ಲಿ ಉತ್ತರಪ್ರದೇಶದ 15 ಜಿಲ್ಲೆಗಳ ರೈತರ ಪ್ರತಿನಿಧಿಗಳು ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಸಚಿವ ನರೇಂದ್ರ ಸಿಂಗ್ ತೋಮರ್ ಅವರನ್ನು ಗುರುವಾರ ಭೇಟಿ ಮಾಡಿ ಹೊಸ ಕಾನೂನುಗಳಿಗೆ ಬೆಂಬಲ ಸೂಚಿಸಿದ್ದಾರೆ. ಅಲ್ಲದೇ ಹೊಸ ಕೃಷಿ ಕಾನೂನುಗಳನ್ನು ಸರ್ಕಾರ ಹಿಂತೆಗೆದುಕೊಂಡ್ರೆ, ಕಿಸಾನ್ ಸೇನಾ ದೊಡ್ಡ ಆಂದೋಲನ ಮಾಡುವ ಎಚ್ಚರಿಕೆ ನೀಡಿದೆ.
ಕೇಂದ್ರ ಸರ್ಕಾರ ಜಾರಿಗೆ ತಂದ ಮೂರು ಕೃಷಿ ಕಾನೂನುಗಳನ್ನು ವಿರೋಧಿಸಿ ಸುಮಾರು 40 ರೈತ ಸಂಘಟನೆಗಳು ದೆಹಲಿಯ ಗಡಿಯಲ್ಲಿ ಒಂದು ತಿಂಗಳಿಂದ ಪ್ರತಿಭಟನಾ ಪ್ರದರ್ಶನ ನಡೆಸುತ್ತಿವೆ. ಮತ್ತೊಂದೆಡೆ, ಕಾನೂನನ್ನು ಬೆಂಬಲಿಸುವ ರೈತ ಸಂಸ್ಥೆಗಳಿಗೆ ಕೇಂದ್ರ ಕೃಷಿ ಸಚಿವರನ್ನು ಭೇಟಿ ಮಾಡುವ ಪ್ರಕ್ರಿಯೆಯು ನಡೆಯುತ್ತಿದೆ. ಈ ಎಲ್ಲ ಸಮಸ್ಯೆಗಳಿಗೆ ಕೇಂದ್ರ ಹೇಗೆ ಇತಿಶ್ರೀ ಹಾಡಲಿದೆ ಎಂಬುದನ್ನು ಕಾದು ನೋಡಬೇಕಿದೆ.