ಚೆನ್ನೈ(ತಮಿಳುನಾಡು): ದೇಶಾದ್ಯಂತ ಮಹಾಮಾರಿ ಕೊರೊನಾ ವೈರಸ್ ಹಾವಳಿ ಜೋರಾಗಿದ್ದು, ಅದೇ ಕಾರಣಕ್ಕಾಗಿ ಆನ್ಲೈನ್ ಮೂಲಕ ವಿದ್ಯಾರ್ಥಿಗಳು ತರಗತಿಗಳಿಗೆ ಹಾಜರಾಗ್ತಿದ್ದಾರೆ. ಆದರೆ ಬಡ ವಿದ್ಯಾರ್ಥಿಗಳಿಗೆ ಸ್ಮಾರ್ಟ್ ಫೋನ್ ಸಿಗದೆ ಆತ್ಮಹತ್ಯೆ ದಾರಿ ಹಿಡಿಯುವ ಪರಿಸ್ಥಿತಿ ನಿರ್ಮಾಣವಾಗಿದೆ.
ತಮಿಳುನಾಡಿನ ಕಲ್ಲಕುರಿಚಿ ಜಿಲ್ಲೆಯಲ್ಲಿ ವಿದ್ಯಾರ್ಥಿನಿಯೋರ್ವಳು ಆನ್ಲೈನ್ ತರಗತಿ ಮಿಸ್ ಆಗಿದ್ದಕ್ಕಾಗಿ ಆತ್ಮಹತ್ಯೆಗೆ ಶರಣಾಗಿದ್ದಾಳೆ. ಆರುಮುಗಂ ಎಂಬ ವ್ಯಕ್ತಿಗೆ ಮೂವರು ಹೆಣ್ಣು ಮಕ್ಕಳಿದ್ದು, ಅದರಲ್ಲಿ ಹಿರಿಯ ಮಗಳು ನಿತ್ಯಾಶ್ರೀ ಬಿಎಸ್ಸಿ(ನರ್ಸಿಂಗ್) ವ್ಯಾಸಂಗ ಮಾಡುತ್ತಿದ್ದಳು. ಕೊರೊನಾ ಹಾವಳಿ ಕಾರಣ ಆನ್ಲೈನ್ ತರಗತಿ ಆರಂಭಗೊಂಡಿದ್ದರಿಂದ ಮೂವರು ಮಕ್ಕಳಿಗೆ ಸೇರಿ 20 ಸಾವಿರ ರೂ. ನೀಡಿ ಒಂದು ಸ್ಮಾರ್ಟ್ ಫೋನ್ ಖರೀದಿಸಲಾಗಿತ್ತು. ಆದರೆ ಒಂದೇ ಸಮಯದಲ್ಲಿ ಮೂವರು ಹೆಣ್ಣು ಮಕ್ಕಳು ಒಟ್ಟಿಗೆ ಪಾಠ ಕೇಳಲು ಸಾದ್ಯವಾಗದಂತಹ ಸ್ಥಿತಿ ನಿರ್ಮಾಣಗೊಂಡಿದೆ.
ಇದೇ ಕಾರಣದಿಂದಾಗಿ ಮನನೊಂದು ನಿತ್ಯಾಶ್ರೀ ಆಗಸ್ಟ್ 29ರಂದು ಮನೆಯಲ್ಲಿ ಯಾರೂ ಇಲ್ಲದ ವೇಳೆ ವಿಷ ಸೇವನೆ ಮಾಡಿದ್ದಾಳೆ. ತಕ್ಷಣವೇ ಆಕೆಯನ್ನ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಂದು ಸಾವನ್ನಪ್ಪಿದ್ದಾಳೆ. ಇದಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.