ಬಿಲಾಸ್ಪುರ್ (ಹಿಮಾಚಲ ಪ್ರದೇಶ): ಬಿಲಾಸ್ಪುರ್ದ ಜಾಂಡುಟಾ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಡೇದರ್ ಗ್ರಾಮದಲ್ಲಿ ಗರ್ಭ ಧರಿಸಿರುವ ಹಸುವೊಂದರ ಬಾಯಿ ಸ್ಫೋಟಕ ವಸ್ತು ತಿಂದು ಛಿದ್ರವಾಗಿರುವ ಭಯಾನಕ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.
ವಿಡಿಯೋದಲ್ಲಿ, ವ್ಯಕ್ತಿಯೋರ್ವ ತನ್ನ ಹಸುವಿಗೆ ಸ್ಫೋಟಕ ಆಹಾರ ನೀಡಿದ್ದರಿಂದ ಅದು ಗಾಯಗೊಂಡಿದೆ. ಬಾಯಿಯಲ್ಲಿ ಸ್ಫೋಟಕ ಸ್ಫೋಟಗೊಂಡ ನಂತರ ಹಸುವಿನ ದವಡೆಯಲ್ಲಿ ತೀವ್ರ ರಕ್ತಸ್ರಾವ ಉಂಟಾಗಿದೆ ಎಂದು ಹೇಳಿಕೊಂಡಿದ್ದಾನೆ. ವಿಡಿಯೋ ಬಿಡುಗಡೆ ಮಾಡಿರುವ ವ್ಯಕ್ತಿ ತನ್ನ ಹೆಸರು ಗುರುದಯಾಲ್ ಸಿಂಗ್ ಎಂದು ಪರಿಚಯಿಸಿಕೊಂಡಿದ್ದಾನೆ. ತನ್ನ ನೆರೆಹೊರೆಯವರು ಹಸುವಿಗೆ ಸ್ಫೋಟಕ ತುಂಬಿರುವ ಆಹಾರ ನೀಡಿದ್ದಾರೆ ಎಂದು ಆರೋಪಿಸಿದ್ದಾನೆ. ಮೂಲಗಳ ಪ್ರಕಾರ, ಪೊಲೀಸರು ಈ ನಿಟ್ಟಿನಲ್ಲಿ ಪ್ರಕರಣ ದಾಖಲಿಸಿದ್ದಾರೆ ಎನ್ನಲಾಗಿದೆ.
ಈ ವಿಷಯ ಮಾಧ್ಯಮಗಳಲ್ಲಿ ಪ್ರಸಾರಗೊಂಡ ನಂತರ ಡಿಎಸ್ಪಿ ಸಂಜಯ್ ಶರ್ಮಾ ಕೂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪೊಲೀಸರು ಗ್ರಾಮವನ್ನು ತಲುಪಿ ಕೆಲವರ ಹೇಳಿಕೆಗಳನ್ನು ದಾಖಲಿಸಿದ್ದಾರೆ. ಇದರೊಂದಿಗೆ ಪೊಲೀಸರು ಸ್ಥಳದಿಂದ ಕೆಲವು ಸ್ಯಾಂಪಲ್‌ಗಳನ್ನು ಸಹ ಸಂಗ್ರಹಿಸಿದ್ದು, ಹೆಚ್ಚಿನ ತನಿಖೆಗಾಗಿ ಎಫ್‌ಎಸ್‌ಎಲ್ ಲ್ಯಾಬ್‌ಗೆ ಕಳುಹಿಸಲಾಗಿದೆ.
ಪ್ರಕರಣ ಬಹಳ ಸೂಕ್ಷ್ಮವಾಗಿದ್ದು, ತನಿಖೆಯ ನಂತರ ಯಾರಾದರೂ ತಪ್ಪಿತಸ್ಥರೆಂದು ಕಂಡು ಬಂದಲ್ಲಿ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. ವಾಸ್ತವವಾಗಿ, ಗರ್ಭ ಧರಿಸಿರುವ ಹಸುವಿನೊಂದಿಗಿನ ಈ ಕ್ರೌರ್ಯದ ಬಗ್ಗೆ ಮೇ 26ರಂದು ಎಫ್‌ಐಆರ್ ದಾಖಲಾಗಿದೆ. ಆದರೆ ಪ್ರಕರಣ ದಾಖಲಾದ ನಂತರವೂ ಏಕೆ ತನಿಖೆ ನಡೆಸಲಿಲ್ಲ ಮತ್ತು ಆರೋಪಿಗಳನ್ನು ಏಕೆ ಬಂಧಿಸಲಿಲ್ಲ ಎಂಬ ಪ್ರಶ್ನೆಗಳು ಕೇಳಿ ಬರುತ್ತಿವೆ.
ಸೆಕ್ಷನ್ 286ರ ಅಡಿಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಡಿಎಸ್ಪಿ ಸಂಜಯ್ ಶರ್ಮಾ ತಿಳಿಸಿದ್ದಾರೆ.