ಭೋಪಾಲ್: ಬಹು ನಿರೀಕ್ಷಿತ ಅಯೋಧ್ಯೆ ರಾಮಮಂದಿರ ಭೂಮಿ ಪೂಜಾ ಕಾರ್ಯಕ್ರಮ ಬರುವ ಆಗಸ್ಟ್ 5ರಂದು ನಡೆಯಲಿದ್ದು, ಇದೇ ವಿಷಯವಾಗಿ ಬಿಜೆಪಿ ಹಿರಿಯ ಮುಖಂಡೆ ಉಮಾ ಭಾರತಿ ಈ ಟಿವಿ ಭಾರತ್ ಜತೆ ಎಕ್ಸ್ಕ್ಲೂಸಿವ್ ಸಂದರ್ಶನದಲ್ಲಿ ಭಾಗಿಯಾಗಿ ಮಾತನಾಡಿದ್ದಾರೆ.
ತಮ್ಮ ಜೀವನದ ಅದ್ಭುತ ಕ್ಷಣಗಳಲ್ಲಿ ಇಂದು ಒಂದಾಗಿದ್ದು, ಇದಕ್ಕಾಗಿ ಬಹಳ ಸಮಯದಿಂದ ಕುತೂಹಲದಿಂದ ಕಾಯುತ್ತಿದ್ದೇನೆ ಎಂದಿದ್ದಾರೆ. ಕಳೆದ ಐದು ಶತಮಾನಗಳಿಂದ ನಡೆಯುತ್ತಿದ್ದ ಹೋರಾಟ ಕೊನೆಗೂ ಅಂತಿಮ ಹಂತಕ್ಕೆ ಬಂದು ನಿಂತಿರುವುದು ನಿಜಕ್ಕೂ ಹೆಮ್ಮೆಯ ವಿಷಯವಾಗಿದೆ ಎಂದು ಅವರು ತಿಳಿಸಿದ್ದಾರೆ.
ಅಯೋಧ್ಯೆ ವಿವಾದಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ನೀಡಿರುವ ತೀರ್ಪುನ್ನ ವಿಶ್ವದಾದ್ಯಂತ ಎಲ್ಲರೂ ಶ್ಲಾಘಿಸಿದ್ದಾರೆ. ಇದು ಕೇವಲ ಬಿಜೆಪಿಗೆ ಮಾತ್ರವಲ್ಲ. ದೇವಾಲಯ ನಿರ್ಮಾಣದ ಆಂದೋಲನದಲ್ಲಿ ಭಾಗಿಯಾದ ಎಲ್ಲರಿಗೂ ವಿಶೇಷ ಸಂದರ್ಭ ಎಂದು ತಿಳಿಸಿದ್ದಾರೆ. ಈಗಲೂ ಸಿಬಿಐ ವಿಶೇಷ ಕೋರ್ಟ್ನಲ್ಲಿ ಇದೇ ವಿಚಾರವಾಗಿ ವಿಚಾರಣೆ ನಡೆಯುತ್ತಿದೆ ಎಂದು ತಿಳಿಸಿರುವ ಅವರು, ನ್ಯಾಯ ದೊರೆಯುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಈ ಹಿಂದೆ ನಾನು ನೀಡಿರುವ ಹೇಳಿಕೆಗೆ ಈಗಲೂ ಬದ್ಧನಾಗಿರುತ್ತೇನೆ. ಚಳವಳಿಯ ಸಂದರ್ಭದಲ್ಲಿ ಅನೇಕ ಸಲ ಗುಂಡಿನ ದಾಳಿಯಿಂದ ಬದುಕುಳಿದಿರುವೆ. ರಾಮ ಮಂದಿರ ನಿರ್ಮಾಣಕ್ಕಾಗಿ ನನ್ನ ರಾಜಕೀಯ ಜೀವನ ಮುಡಿಪಾಗಿಟ್ಟಿರುವೆ ಎಂದಿದ್ದಾರೆ. ಭಗವಾನ್ ರಾಮ ಪ್ರತಿಯೊಬ್ಬರಿಗೂ ಸೇರಿದವನು. ಅದು ಕೇವಲ ಭಾರತೀಯ ಜನತಾ ಪಕ್ಷಕ್ಕೆ ಮಾತ್ರ ಸೇರಿಲ್ಲ ಎಂದು ಹೇಳಿದ್ದಾರೆ. ಆಗಸ್ಟ್ 5ರಂದು ನಡೆಯಲಿರುವ ವಿಶೇಷ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗಿಯಾಗಲಿದ್ದಾರೆ.