ಕೃಷ್ಣ (ಆಂಧ್ರಪ್ರದೇಶ): ಮೂರ್ಛೆರೋಗ ಹೊಂದಿದ್ದ ವುಯ್ಯುರು ಪಟ್ಟಣದ 20 ವರ್ಷದ ಯುವಕ ಸಾವನ್ನಪ್ಪಿದ್ದು, ರೋಗಿಯ ಸಾವಿಗೆ ಖಾಸಗಿ ಆಸ್ಪತ್ರೆ ಸಿಬ್ಬಂದಿ ನಿರ್ಲಕ್ಷ್ಯ ಕಾರಣ ಎನ್ನಲಾಗಿದೆ.
ಮೃತ ಯುವಕ ತಿರುಮಲ ರಾವ್ ಅವರ ತಂದೆ ಆಸ್ಪತ್ರೆಯ ಸಿಬ್ಬಂದಿ ನಿರ್ಲಕ್ಷ್ಯದ ಆರೋಪ ಹೊರಿಸಿದ್ದಾರೆ. ಪೊಲೀಸರಿಗೆ ನೀಡಿದ ದೂರಿನಲ್ಲಿ ಸರ್ಕಾರಿ ಆಸ್ಪತ್ರೆಗೆ ಸ್ಥಳಾಂತರಿಸಲು ಪ್ರಯತ್ನಿಸುತ್ತಿದ್ದಾಗ ಕೊನೆಯುಸಿರೆಳೆದಿದ್ದಾನೆ ಎಂದು ಹೇಳಿದ್ದಾರೆ.
ತಿರುಮಲ ರಾವ್ಗೆ ಬಾಲ್ಯದಿಂದಲೂ ಮೂರ್ಛೆರೋಗ ಇತ್ತು. ಶನಿವಾರ ಫಿಟ್ಸ್ ಬಂದು ನಾಲಿಗೆ ಕಚ್ಚಿಕೊಂಡು ಗಾಯಗೊಂಡಿದ್ದರು. ಯುವಕನ ಪೋಷಕರು ಮಧ್ಯಾಹ್ನ 2:30ರ ಸುಮಾರಿಗೆ ಖಾಸಗಿ ಆಸ್ಪತ್ರೆಗೆ ಕರೆದೊಯ್ದರು. ಸ್ವಲ್ಪ ಸಮಯ ಕಾಯಿರಿ ವೈದ್ಯರು ಬರುತ್ತಾರೆ ಎಂದು ಸಿಬ್ಬಂದಿ ತಿಳಿಸಿದ್ದಾರೆ.
ಕೆಲ ಸಮಯದ ನಂತರ ವೈದ್ಯರು ಬರುವುದು ತಡವಾಗುತ್ತದೆ ಸಾಧ್ಯವಾದರೆ ಕಾಯಿರಿ ಇಲ್ಲವೇ ವಿಜಯವಾಡಕ್ಕೆ ಹೋಗುವಂತೆ ತಿಳಿಸಿದ್ದಾರೆ. ಯುವಕನನ್ನು ಬೇರೆ ಆಸ್ಪತ್ರೆಗೆ ಸಾಗಿಸುವಾಗ ಕೊನೆಯುಸಿರೆಳೆದಿದ್ದಾನೆ. ಮೊದಲೇ ಮಾಹಿತಿ ನೀಡಿದರೆ ಯುವಕ ಬದುಕುತ್ತಿದ್ದ ಎಂದು ದೂರಿರುವ ಪೋಷಕರು ಖಾಸಗಿ ಆಸ್ಪತ್ರೆ ವಿರುದ್ಧ ದೂರು ದಾಖಲಿಸಿದ್ದಾರೆ. ಆದರೆ ಆಸ್ಪತ್ರೆ ಸಿಬ್ಬಂದಿ ಆರೋಪ ತಿರಸ್ಕರಿಸಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.