ಧರ್ಮಶಾಲಾ (ಹಿಮಾಚಲ ಪ್ರದೇಶ): ಹೋಂ ಕ್ವಾರಂಟೈನ್ನಲ್ಲಿರಬೇಕಾದ ಯಾವುದೇ ವ್ಯಕ್ತಿಗಳು ಕ್ವಾರಂಟೈನ್ ನಿಯಮ ಉಲ್ಲಂಘಿಸಿರುವುದು ಕಂಡುಬಂದರೆ, ಅವರ ಕುಟುಂಬದ ಎಲ್ಲ ಸದಸ್ಯರನ್ನು ಕ್ವಾರಂಟೈನ್ ಮಾಡಲಾಗುತ್ತದೆ ಎಂದು ಕಾಂಗ್ರಾ ಪೊಲೀಸರು ಎಚ್ಚರಿಸಿದ್ದಾರೆ.
ಈ ಬಗೆಗಿನ ಹೊಸ ನಿಬಂಧನೆಗಳನ್ನು ಶುಕ್ರವಾರ ಮಾಡಲಾಗಿದೆ ಎಂದು ಕಾಂಗ್ರೆಸ್ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ವಿಮುಕ್ತ್ ರಂಜನ್ ತಿಳಿಸಿದ್ದಾರೆ.
ಈ ಹೊಸ ಆದೇಶದ ಪ್ರಕಾರ, ಹಿಮಾಚಲ ಪ್ರದೇಶದ ಇತರ ಜಿಲ್ಲೆಗಳು ಅಥವಾ ಭಾರತದ ಇತರ ರಾಜ್ಯಗಳಿಂದ ಜಿಲ್ಲೆಗೆ ಪ್ರವೇಶಿಸಿದ ದಿನಾಂಕದಿಂದ 28 ದಿನಗಳವರೆಗೆ ಹೋಂ ಕ್ವಾರಂಟೈನ್ನಲ್ಲಿ ಇರಿಸಲಾಗುತ್ತದೆ. ಇವರು ಕಟ್ಟುನಿಟ್ಟಾಗಿ ಕ್ವಾರಂಟೈನ್ ನಿಯಮಗಳನ್ನು ಪಾಲಿಸಬೇಕು. ಒಂದು ವೇಳೆ ನಿರ್ಬಂಧ ವಿಧಿಸಿರುವ ವ್ಯಕ್ತಿ ನಿಯಮ ಉಲ್ಲಂಘಿಸುತ್ತಿರುವುದು ಕಂಡುಬಂದರೆ, ಅವನ ಇಡೀ ಕುಟುಂಬ ಸದಸ್ಯರನ್ನು ಅವನೊಂದಿಗೆ ಗೃಹಬಂಧನದಲ್ಲಿರಿಸಲಾಗುವುದು ಎಂದು ರಂಜನ್ ಖಡಕ್ ಸೂಚನೆ ನೀಡಿದ್ದಾರೆ.
ರಾಜ್ಯಕ್ಕೆ ಕಳೆದ ಒಂದು ವಾರದಲ್ಲಿ ರಾಜ್ಯ ಸರ್ಕಾರ ನೀಡಿದ ಪಾಸ್ಗಳ ಆಧಾರದ ಮೇಲೆ 90,000 ಜನರು ಇತರ ರಾಜ್ಯಗಳಿಂದ ತಮ್ಮ ತಮ್ಮ ಮನೆಗೆ ಬಂದಿದ್ದಾರೆ. ಇನ್ನು ಸುಮಾರು 20,000 ಜನರು ರಾಜ್ಯವನ್ನು ಪ್ರವೇಶಿಸಲು ಕಾಯುತ್ತಿದ್ದಾರೆ.
ಇಲ್ಲಿಯವರೆಗೆ ರಾಜ್ಯದಲ್ಲಿ 50 ಕೊರೊನಾ ಪ್ರಕ್ರಣಗಳು ವರದಿಯಾಗಿದ್ದು, ಈ ಎಲ್ಲ ಸೋಂಕಿತರು ಬೇರೆ ರಾಜ್ಯಗಳಿಂದ ಸೋಂಕನ್ನು ರಾಜ್ಯಕ್ಕೆ ತಂದಿದ್ದಾರೆ. ಹೀಗಾಗಿ ಈ ಕಟ್ಟುನಿಟ್ಟಿನ ಕ್ರಮಕ್ಕೆ ನಿರ್ಧರಿಸಲಾಗಿದೆ ಎಂದು ಅವರು ಹೇಳಿದ್ದಾರೆ.