ನವದೆಹಲಿ: ಕೊರೊನಾ ಹರಡುವುದನ್ನು ನಿಯಂತ್ರಿಸಲು ದೇಶದಲ್ಲಿ ಲಾಕ್‌ಡೌನ್ ವಿಧಿಸಲಾಗಿದ್ದರೂ ಗರ್ಭಿಣಿಯರು, ಡಯಾಲಿಸಿಸ್ ರೋಗಿಗಳು ಮತ್ತು ಥಲಸ್ಸೆಮಿಯಾದಂತಹ ಕಾಯಿಲೆಗಳಿಂದ ಬಳಲುತ್ತಿರುವವರ ರೋಗಿಗಳಿಗೆ ಚಿಕಿತ್ಸೆ ಅಥವಾ ವೈದ್ಯಕೀಯ ಅಗತ್ಯಗಳನ್ನು ಗಮನದಲ್ಲಿರಿಸಿಕೊಳ್ಳಬೇಕು ಎಂದು ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ಎಲ್ಲಾ ರಾಜ್ಯಗಳಿಗೆ ಸೂಚನೆ ನೀಡಿದ್ದಾರೆ.
ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳ ಆರೋಗ್ಯ ಸಚಿವರ ಜೊತೆ ನಡೆದ ವಿಡಿಯೋ ಕಾನ್ಫರೆನ್ಸ್ನಲ್ಲಿ ಮಾತನಾಡಿದ ಸಚಿವರು, ಕೋವಿಡ್-19 ಹರಡುವಿಕೆ ತಗ್ಗಿಸಲು ಹಾಗೂ ಅದಕ್ಕೆ ಸಿದ್ಧತೆ ನಡೆಸುವುದರ ಬಗ್ಗೆ ಕೆಲವು ಸಲಹೆಗಳನ್ನು ನೀಡಿದರು.
ರಾಜ್ಯಗಳಲ್ಲಿ ಪಿಪಿಇ, ಎನ್ 95 ಮಾಸ್ಕ್ಗಳು, ಪರೀಕ್ಷಾ ಕಿಟ್ಗಳು, ಔಷಧಿಗಳು ಹಾಗೂ ವೆಂಟಿಲೇಟರ್ಗಳ ಅವಶ್ಯಕತೆ ಮತ್ತು ಸಮರ್ಪಕ ಬಳಕೆಯನ್ನು ಪರಿಶೀಲಿಸಿದ ಹರ್ಷವರ್ಧನ್, ಈ ನಿರ್ಣಾಯಕ ಸಂದರ್ಭದಲ್ಲಿ ಸರ್ಕಾರ ಅಗತ್ಯವಿರುವ ವಸ್ತುಗಳ ಸರಬರಾಜಿನಲ್ಲಿ ಯಾವುದೇ ವ್ಯತ್ಯಯ ಆಗುವುದಿಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಲು ಪ್ರಯತ್ನಿಸುತ್ತಿದೆ.
ಈಗಾಗಲೇ ಅವಶ್ಯಕತೆ ಇರುವಷ್ಟು ವೈದ್ಯಕೀಯ ಪರಿಕರಗಳನ್ನು ಒದಗಿಸಿಕೊಡಲಾಗಿದೆ. ಇನ್ನು ರಾಜ್ಯಗಳ ಭಾಗಶಃ ಅವಶ್ಯಕತೆಗಳನ್ನು ಕೂಡ ಪರಿಹರಿಸಲಾಗಿದೆ ಎಂದು ತಿಳಿಸಿದ್ದಾರೆ.
ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಚಿಕಿತ್ಸೆಗೆ ಅಗತ್ಯವಿರುವ ಗರ್ಭಿಣಿಯರು, ಡಯಾಲಿಸಿಸ್ ರೋಗಿಗಳು ಮತ್ತು ಥಲಸ್ಸೆಮಿಯಾದಂತಹ ಕಾಯಿಲೆಗಳಿಂದ ಬಳಲುತ್ತಿರುವವರ ಚಿಕಿತ್ಸೆ ಅಥವಾ ವೈದ್ಯಕೀಯ ಅಗತ್ಯತೆಗಳನ್ನು ರಾಜ್ಯಗಳು ಗಮನದಲ್ಲಿರಿಸಿಕೊಳ್ಳಬೇಕು. ರಾಜ್ಯಗಳು ಸ್ವಯಂಪ್ರೇರಿತ ರಕ್ತದಾನವನ್ನು ಪ್ರೇರಿಪಿಸಬೇಕು ಮತ್ತು ಯಾವುದೇ ಸಮಯದಲ್ಲಿ ರಕ್ತವನ್ನು ಸಮರ್ಪಕವಾಗಿ ಪೂರೈಸಲು ಸುರಕ್ಷಿತ ರಕ್ತದಾನ ಮೊಬೈಲ್ ಘಟಕಗಳ ವ್ಯವಸ್ಥೆ ಮಾಡಬೇಕು ಎಂದು ಸಲಹೆ ನೀಡಿದ್ದಾರೆ.
ಕೋವಿಡ್ 19 ಹರಡುವಿಕೆಯ ಸರಪಳಿ ಮುರಿಯಲು ಮುಂದಿನ ಎರಡು ವಾರ ದೇಶಕ್ಕೆ ಅತ್ಯಂತ ನಿರ್ಣಾಯಕವಾಗಿದೆ ಎಂದು ಸೂಚಿಸಿದ ಹರ್ಷವರ್ಧನ್ ಈ ಸಮಯದಲ್ಲಿ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಲು ಹಾಗೂ ವೈಯಕ್ತಿಕ ಶುಚಿತ್ವದ ಬಗ್ಗೆ ಜಾಗೃತಿ ಮೂಡಿಸಲು ಎಲ್ಲಾ ರಾಜ್ಯದ ಸಚಿವರನ್ನು ಕೋರಿದರು.