ಗ್ರೇಟರ್ ನೋಯ್ಡಾ ( ಉತ್ತರ ಪ್ರದೇಶ) : ಗೌತಮ್ ಬುದ್ಧ ನಗರ ಜಿಲ್ಲೆಯ ಗ್ರೇಟರ್ ನೋಯ್ಡಾ ಬೀಟಾ 2 ಪ್ರದೇಶದಲ್ಲಿ ಪೊಲೀಸರು ಮತ್ತು ದುಷ್ಕರ್ಮಿಗಳ ನಡುವೆ ಗುಂಡಿನ ಚಕಮಕಿ ನಡೆದು, ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಬೀಟಾ 2 ಪ್ರದೇಶದಲ್ಲಿ ಪೊಲೀಸರು ವಾಹನಗಳನ್ನು ತಪಾಸಣೆ ನಡೆಸುತ್ತಿದ್ದಾಗ ಕಾರಿನಲ್ಲಿ ಅನುಮಾನಾಸ್ಪದ ವ್ಯಕ್ತಿಗಳು ಬರುತ್ತಿದ್ದನ್ನು ಗಮನಿಸಿ ನಿಲ್ಲಿಸುವಂತೆ ಸೂಚಿಸಿದ್ದರು. ಆದರೆ, ಕಾರಿನಲ್ಲಿದ್ದ ದುಷ್ಕರ್ಮಿಗಳು ಪೊಲೀಸರ ಮೇಲೆ ಗುಂಡಿನ ದಾಳಿ ಮಾಡಿ ಪರಾರಿಯಾಗಲು ಯತ್ನಿಸಿದ್ದರು. ಈ ವೇಳೆ, ಪ್ರತಿ ದಾಳಿ ನಡೆಸಿದ ಪೊಲೀಸರು ಇಬ್ಬರನ್ನು ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಓರ್ವ ಕತ್ತಲಲ್ಲಿ ತಪ್ಪಿಸಿಕೊಂಡಿದ್ದಾನೆ, ಆತನ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ.
ಬಂಧಿತರಿಂದ ಲೂಟಿ ಮಾಡಿದ್ದ ಎರಡು ಕಾರು, ಎರಡು ಮೊಬೈಲ್ ಫೋನ್, ಕೆಲವು ಲೈವ್ ಕಾರ್ಟ್ರಿಡ್ಜ್ ಮತ್ತಿತರ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ದುಷ್ಕರ್ಮಿಗಳ ತಂಡ ನಿರ್ಜನ ಪ್ರದೇಶದಲ್ಲಿ ಕಾರಿನಲ್ಲಿ ಕೂತು ಜನರನ್ನು ಲೂಟಿ ಮಾಡುತ್ತಿದ್ದರು . ಅಲ್ಲದೇ ಎಟಿಎಂ ಪಿನ್ ನಂಬರ್ ತಿಳಿದುಕೊಂಡು ಖಾತೆಯಿಂದ ಹಣ ದೋಚುತ್ತಿದ್ದರು ಎನ್ನಲಾಗಿದೆ. ಈ ಬಗ್ಗೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಕಾರ್ಯಾಚರಣೆಯಲ್ಲಿ ಇಬ್ಬರು ಪೊಲೀಸ್ ಸಿಬ್ಬಂದಿ ಗಾಯಗೊಂಡಿರುವುದಾಗಿ ಗ್ರೇಟರ್ ನೋಯ್ಡಾ ಎಡಿಸಿಪಿ ವಿಶಾಲ್ ಪಾಂಡೆ ತಿಳಿಸಿದ್ದಾರೆ.