ಫುಲ್ಬಾನಿ(ಒಡಿಶಾ): ಗ್ರಾಮಗಳು ಅಭಿವೃದ್ಧಿಯಾದಾಗ ಮಾತ್ರ ದೇಶ ಅಭಿವೃದ್ಧಿ ಹೊಂದುವುದು ಎಂಬ ಗಾದೆ ಮಾತಿದೆ. ಆದರೆ, ಇಲ್ಲೊಂದು ಗ್ರಾಮದ ಜನರು ತಮ್ಮ ಪ್ರಾಣ ಪಣಕ್ಕಿಟ್ಟು ಪ್ರವಾಹದಿಂದ ತುಂಬಿ ಹರಿಯುವ ನದಿ ಪ್ರತಿದಿನ ದಾಟುವಂತಹ ಸ್ಥಿತಿ ನಿರ್ಮಾಣಗೊಂಡಿದೆ.
ಒಡಿಶಾದ ಕಾಲಿಪೆನು ನದಿ ಅತ್ಯಂತ ಪ್ರವಾಹದಿಂದ ತುಂಬಿ ಹರಿಯುವ ನದಿಗಳಲ್ಲೊಂದು. ಆದರೆ, ಇಲ್ಲಿನ ಬುಡಕಟ್ಟು ಜನರು ನದಿ ದಾಟಬೇಕಾದರೆ ವಿದ್ಯುತ್ ತಂತಿ ಹಾಗೂ ಹಗ್ಗ ಬಳಕೆ ಮಾಡುತ್ತಿದ್ದಾರೆ. ಸೇತುವೆ ರೀತಿಯಲ್ಲಿ ಇವುಗಳ ಬಳಕೆ ಮಾಡ್ತಿದ್ದು, ಅಪಾಯ ಲೆಕ್ಕಿಸದೇ ಅವುಗಳ ಮೇಲೆ ನಡೆದುಕೊಂಡು ಹೋಗುವ ಸ್ಥಿತಿ ನಿರ್ಮಾಣಗೊಂಡಿದೆ.
ಒಡಿಶಾದ ಕಂಧಮಾಲ್ ಜಿಲ್ಲೆಯ ಗುಂಜಿಬಾದಿ ಗ್ರಾಮದ ಜನರು ನದಿ ದಾಟಲು ಸೇತುವೆಯಾಗಿ ವಿದ್ಯುತ್ ತಂತಿ, ಹಗ್ಗ ಬಳಕೆ ಮಾಡ್ತಿದ್ದಾರೆ. ಚಿಕ್ಕ ಮಕ್ಕಳಿಂದ ಹಿಡಿದು ರೋಗಿಗಳು ಈ ವಿದ್ಯುತ್ ತಂತಿ ಮೂಲಕವೇ ನಡೆದುಕೊಂಡು ಹೋಗುವುದು ಅನಿವಾರ್ಯವಾಗಿದೆ. ಇದರ ಮೇಲೆ ನಡೆಯುವಾಗ ಕ್ಷಣಮಾತ್ರ ಗಮನ ಬೇರೆಡೆ ಹೋದ್ರೆ ಅಪಾಯ ಕಟ್ಟಿಟ್ಟ ಬುತ್ತಿ. ನಾಲ್ಕು ತುಂಡು ವಿದ್ಯುತ್ ತಂತಿ ನದಿಯ ಎರಡು ದಡದ ಮರಗಳಿಗೆ ಕಟ್ಟಲಾಗಿದ್ದು, ಅದರ ಮೇಲೆ ನಡೆದುಕೊಂಡು ಹೋಗಿ ಮತ್ತೊಂದು ದಡ ಸೇರಿಕೊಳ್ಳುತ್ತಾರೆ.
ಕಳೆದ 30 ವರ್ಷಗಳಿಂದ ಇಂತಹ ಸ್ಥಿತಿ ನಿರ್ಮಾಣಗೊಂಡಿದ್ದು, ಯಾವುದೇ ರೀತಿಯ ಸೇತುವೆ ನಿರ್ಮಾಣ ಮಾಡಲು ಅಧಿಕಾರಿಗಳು, ಜನಪ್ರತಿನಿಧಿಗಳು ಮುಂದಾಗಿಲ್ಲ.
ಪರ್ಯಾಯ ಮಾರ್ಗ ವ್ಯವಸ್ಥೆ ಲಭ್ಯ
ನದಿಯ ಇನ್ನೊಂದು ದಡಕ್ಕೆ ಹೋಗಲು ಅವರಿಗೆ ಈಗಾಗಲೇ ಪರ್ಯಾಯ ವ್ಯವಸ್ಥೆ ಲಭ್ಯವಿದೆ. ಆದರೆ, ಅದಕ್ಕಾಗಿ ಜನರು ಆರು ಕಿಲೋ ಮೀಟರ್ ದೂರ ಹೋಗಬೇಕಾಗಿದೆ. ಹೀಗಾಗಿ ಬುಡಕಟ್ಟು ಜನರು ಇದರ ಮೂಲಕ ಹೋಗುತ್ತಾರೆ. ಅನೇಕ ಸಲ ಸ್ಥಳೀಯ ಅಧಿಕಾರಿಗಳು ವಿದ್ಯುತ್ ತಂತಿ ಕಿತ್ತು ಹಾಕಿದ್ದು, ಇದಕ್ಕೆ ತೀವ್ರ ವಿರೋಧ ಸಹ ವ್ಯಕ್ತವಾಗಿದೆ. ಇದೇ ಮಾರ್ಗದಲ್ಲಿ ಅವರು ಸೇತುವೆ ನಿರ್ಮಾಣ ಮಾಡಿಕೊಡುವಂತೆ ಬೇಡಿಕೆ ಸಹ ಇಟ್ಟಿದ್ದಾರೆ.