ಪಾಟ್ನಾ: ಬಿಹಾರದ 243 ಕ್ಷೇತ್ರಗಳ ಪೈಕಿ ಇಂದು ಎರಡನೇ ಹಂತದಲ್ಲಿ 94 ಕ್ಷೇತ್ರಗಳಲ್ಲಿ ಮತದಾನ ನಡೆದಿದ್ದು, 2015ರ ಚುನಾವಣೆಗಿಂತಲೂ ಕಡಿಮೆ ಮತದಾನವಾಗಿರುವುದು ಅಭ್ಯರ್ಥಿಗಳಲ್ಲಿ ಆತಂಕ ಮೂಡಿಸಿದೆ. ಅಕ್ಟೋಬರ್ 28ರಂದು ನಡೆದಿದ್ದ ಮೊದಲ ಹಂತದ ಚುನಾವಣೆಯಲ್ಲಿ 71 ಕ್ಷೇತ್ರದಲ್ಲಿ ಶೇ. 53.23ರಷ್ಟು ವೋಟಿಂಗ್ ಆಗಿತ್ತು.
ಬಿಹಾರದಲ್ಲಿ 2ನೇ ಹಂತದಲ್ಲಿ 53.5ರಷ್ಟು ಮತದಾನ ನಡೆದಿದ್ದು, 2015ರಲ್ಲಿ 56.5ರಷ್ಟು ಮತದಾನವಾಗಿತ್ತು. 17 ಜಿಲ್ಲೆಯ 94 ಕ್ಷೇತ್ರಗಳಲ್ಲಿ ಇಂದು ವೋಟಿಂಗ್ ನಡೆದಿದ್ದು, ಪ್ರಮುಖ ದಿಗ್ಗಜರು ಚುನಾವಣಾ ಕಣದಲ್ಲಿದ್ದಾರೆ. ಬಿಹಾರದ ಮುಜಫರ್ಪುರ್ದಲ್ಲಿ ಶೇ. 41.25, ಪಶ್ಚಿಮ ಚಂಪಾರಣ್ಯ ಶೇ. 39.34 ಖಗರಿಯಾ ಶೇ. 38.11, ಸಮಸ್ತಿಪುರ ಶೇ. 36.99ರಷ್ಟು ಮತದಾನ ದಾಖಲಾಗಿದೆ.
17 ಜಿಲ್ಲೆಗಳಲ್ಲಿ ಒಟ್ಟು 41,362 ಮತದಾನ ಕೇಂದ್ರಗಳನ್ನು ತೆರೆಯಲಾಗಿತ್ತು. ಪ್ರಮುಖವಾಗಿ ವಿರೋಧ ಪಕ್ಷ ಆರ್ಜೆಡಿ ನಾಯಕ ತೇಜಸ್ವಿ ಯಾದವ್, ತೇಜ್ ಪ್ರತಾಪ್ ಯಾದವ್, ನಿತೀಶ್ ಸರ್ಕಾರದ ನಾಲ್ವರು ಸಚಿವರು, ನಟ ಶತ್ರುಘ್ನ ಸಿನ್ಹಾರ ಪುತ್ರ ಸೇರಿದಂತೆ ಅನೇಕರು ಕಣದಲ್ಲಿದ್ದು, ಅವರ ಭವಿಷ್ಯ ಇದೀಗ ಮತ ಯಂತ್ರದಲ್ಲಿ ಭದ್ರವಾಗಿದೆ. ಇಂದಿನ ಮತದಾನದಲ್ಲಿ 2.85 ಕೋಟಿ ಮತದಾರರು 1,463 ಅಭ್ಯರ್ಥಿಗಳ ಭವಿಷ್ಯ ಬರೆದಿದ್ದಾರೆ.