ನವದೆಹಲಿ:1700 ಕೋಟಿಗೂ ಅಧಿಕ ಹಣ ವಂಚನೆ ಮಾಡಿದ ಆರೋಪದಲ್ಲಿ ಹೈದ್ರಾಬಾದ್ನ ಇಬ್ಬರೂ ಆರೋಪಿಗಳನ್ನು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಬಂಧಿಸಿದ್ದಾರೆ.
LMIPHL ಸಂಸ್ಥೆಯ ಪ್ರಮೋಟರ್ ಆದ ಜಿಎಸ್ಸಿ ರಾಜು ಹಾಗೂ ಆತನ ನಿಕಟವರ್ತಿ ಎ.ವಿ. ಪ್ರಸಾದ್ ಎಂಬಾತನನ್ನು ಪಿಎಂಎಲ್ಎ ಕಾಯ್ದೆಯಡಿ ಬಂಧಿಸಲಾಗಿದ್ದು,ಇಡಿ ವಿಚಾರಣೆಗೊಳಪಡಿಸಿದೆ.ಈ ಪ್ರಕರಣದಲ್ಲಿ ಈವರೆಗೆ 33 ಶೆಲ್ ಕಂಪನಿಗಳು ಮತ್ತು ನಲವತ್ತಕ್ಕೂ ಹೆಚ್ಚು ಕಾಂಟ್ರ್ಯಾಕ್ಟರ್ಗಳನ್ನ ತನಿಖೆ ಮಾಡಲಾಗಿದೆ ಎಂದು ಇಡಿ ತಿಳಿಸಿದೆ. ಈ ವಂಚನೆ ಪ್ರಕರಣ ಸಂಬಂಧ ತನಿಖೆ ನಡೆಸಿದ್ದ ಸಿಬಿಐ ಆರೋಪಿಗಳ ಮೇಲೆ 3 ಎಫ್ಐಆರ್ಗಳನ್ನು ದಾಖಲಿಸಿತ್ತು. ಇದನ್ನು ಪರಿಶೀಲನೆ ನಡೆಸಿದ ನಂತರ ಇಡಿ ಈ ಇಬ್ಬರ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಿದೆ.
ಇದು ಆರೋಪಿ ರಾಜು ಕಾನೂನುಬಾಹಿರವಾಗಿ ಲೇಔಟ್ಗಳು ಮತ್ತು ಸೈಟ್ಗಳನ್ನು ಸುಮಾರು 315 ಜನರಿಗೆ ಮಾರಾಟ ಮಾಡುವ ಮೂಲಕ ಬ್ಯಾಂಕ್ಗೆ ವಂಚಿಸಲು ತನ್ನ ಸಹಚರರೊಂದಿಗೆ ಸೇರಿ ನಡೆಸಿದ ಪೂರ್ವ ನಿಯೋಜಿತ ಪಿತೂರಿ ಎಂದು ಇಡಿ ಅಧಿಕಾರಿಗಳು ತಿಳಿಸಿದ್ದಾರೆ.
ಇಡಿ ಮಾಹಿತಿ ಪ್ರಕಾರ ಆರೋಪಿ ರಾಜು ತನ್ನ ರೆಸಾರ್ಟ್ ಪ್ರಾಜೆಕ್ಟ್ ಗಾಗಿ ಈಗಾಗಲೇ ಮಾರಾಟವಾಗಿರುವ ಸೈಟ್ಗಳ ಕೆಲವು ದಾಖಲಾತಿಗಳನ್ನ ಕೂಡ ಬ್ಯಾಂಕ್ನಲ್ಲಿ ಅಡವಿಟ್ಟು ಬ್ಯಾಂಕ್ಗೆ ವಂಚಿಸಿದ್ದಾನೆ. ಇನ್ನು ಬ್ಯಾಂಕುಗಳು ನೀಡಿದ ಸಾಲಗಳನ್ನು ಎಲ್ಎಂಐಪಿಹೆಚ್ಎಲ್ ನ ಸಣ್ಣ ಉದ್ಯೋಗಿಗಳ ಹೆಸರಿನಲ್ಲಿ ತೆರೆಯಲಾದ ಶೆಲ್ ಸಂಸ್ಥೆಗಳಿಗೆ ಬಳಸಲಾಗಿದೆ ಎಂದು ಇಡಿ ಆರೋಪಿಸಿದೆ. ಜೊತೆಗೆ ಈ ಹಣದ ಒಂದು ಭಾಗವನ್ನು ಕೋಲ್ಕತಾ ಮೂಲದ 'ಜಮಾ-ಖಾರ್ಚ್' (ಶೆಲ್) ಕಂಪನಿಗೆ ಹೂಡಿಕೆಗಳಾಗಿ ಮತ್ತೆ ಎಲ್‌ಎಂಐಪಿಎಚ್‌ಎಲ್‌ಗೆ ರವಾನಿಸಲಾಗಿದೆ.
ಕೆಲವು ಚಾರ್ಟರ್ಡ್ ಅಕೌಂಟೆಂಟ್‌ಗಳ ಜೊತೆ ಸೇರಿ ರಾಜು ಎಲ್‌ಎಂಐಪಿಎಚ್‌ಎಲ್‌ನ ಬ್ಯಾಲೆನ್ಸ್ ಶೀಟ್‌ಗಳಲ್ಲಿ ನಕಲಿ ಷೇರು ಬಂಡವಾಳ ಮತ್ತು ಷೇರು ಪ್ರೀಮಿಯಂ ಪುಸ್ತಕ ನಮೂದುಗಳನ್ನು ರಚಿಸಿದ್ದಾರೆ ಎಂದು ತನಿಖೆಯಿಂದ ತಿಳಿದುಬಂದಿದೆ.
ಚಾರ್ಟಡ್ ಅಕೌಂಟೆಂಟ್ಸ್ ಮತ್ತು ರಾಜು ಈ ನಕಲಿ ಇಕ್ವಿಟಿಯನ್ನು ಮಾರ್ಜಿನ್ ಹಣವನ್ನು ಮೋಸದಿಂದ ತೋರಿಸಲು ಮತ್ತು ಕಂಪನಿಯ ಅರ್ಹತೆ ಇಲ್ಲದ ಬೃಹತ್ ಸಾಲಗಳನ್ನು ನೀಡಿದ್ದಕ್ಕಾಗಿ ಬ್ಯಾಂಕುಗಳನ್ನು ವಂಚಿಸಲು ಸಂಸ್ಥೆಯ ಸಾಲ-ಇಕ್ವಿಟಿ ಅನುಪಾತವನ್ನು ಸುಧಾರಿಸಲು ಬಳಸಿದ್ದಾರೆ ಎಂದು ಇಡಿ ಹೇಳಿದೆ. ಎಲ್ಎಂಐಪಿಹೆಚ್ಎಲ್ ಯಾವುದೇ ಲೆಡ್ಜರ್ ಹಾಗೂ ನಿರ್ಮಾಣ ಚಟುವಟಿಕೆಗಳಿಗೆ ಇನ್‌ವಾಯ್ಸ್ ಮತ್ತು ಇತರರ ಸ್ಥಿರ ಆಸ್ತಿ ರೆಜಿಸ್ಟರ್‌ಗಳನ್ನು ಇದುವರೆಗೂ ಸರಿಯಾಗಿ ನಿರ್ವಹಿಸಿಲ್ಲ. ಮತ್ತು ಇದಕ್ಕೆ ಸಂಬಂಧಿಸಿದ ದಾಖಲೆಗಳನ್ನು ತನಿಖೆಯ ಸಮಯದಲ್ಲಿ ನೀಡಲು ವಿಫಲವಾಗಿದೆ ಎಂದು ಇಡಿ ಆರೋಪಿಸಿದೆ.
ಕೆಲವು ವರ್ಷಗಳಿಂದ ಸ್ಥಳೀಯರ ಪ್ರಭಾವವನ್ನು ಬಳಸಿಕೊಂಡು ಅನೇಕ ಸ್ಥಿರ ಆಸ್ತಿಗಳನ್ನು ಬೆನಾಮಿ ಹೆಸರುಗಳಿಗೆ ವರ್ಗಾಯಿಸಲಾಗಿದೆ ಎಂದು ಇಡಿ ತಿಳಿಸಿದೆ. ಈ ಪ್ರಕರಣದಲ್ಲಿ ಸುಮಾರು 250 ಕೋಟಿಗೂ ಹೆಚ್ಚು ಮೌಲ್ಯದ ಆಸ್ತಿಗಳನ್ನು ಈ ಏಜೆನ್ಸಿಯಿಂದ ಬೋಗಸ್ ಮಾಡಲಾಗಿದೆ ಎಂದು ಇಡಿ ತಿಳಿಸಿದೆ.