ನವದೆಹಲಿ: ಕಳೆದ ಸೋಮವಾರ ರಾತ್ರಿ ಭಾರತ-ಚೀನಾ ಯೋಧರ ನಡುವೆ ಲಡಾಖ್ನ ಗಾಲ್ವಾನ್ ಕಣಿವೆಯಲ್ಲಿ ನಡೆದ ಸಂಘರ್ಷದ ವೇಳೆ ಭಾರತದ 20 ಯೋಧರು ಹುತಾತ್ಮರಾಗಿದ್ದು, ಚೀನಾದ ಅನೇಕ ಸೈನಿಕರು ಈ ಘಟನೆಯಲ್ಲಿ ಸಾವನ್ನಪ್ಪಿದ್ದಾರೆ ಎಂಬ ವರದಿ ಎಲ್ಲೆಡೆ ಹರಿದಾಡಿತ್ತು. ಆದರೆ ಇದರ ಬಗ್ಗೆ ಯಾವುದೇ ರೀತಿಯ ಖಚಿತ ಮಾಹಿತಿ ಲಭ್ಯವಾಗಿರಲಿಲ್ಲ.
ಲಡಾಖ್ ಸಂಘರ್ಷದ ಬಳಿಕ ಭಾರತ-ಚೀನಾ ಅನೇಕ ಸುತ್ತಿನ ಮಾತುಕತೆ ನಡೆಸಿದ್ದು, ಇಂದು ನಡೆದ ಲೆಫ್ಟಿನೆಂಟ್ ಜನರಲ್ ಮಟ್ಟದ ಸಭೆಯಲ್ಲಿ ಚೀನಾ ತಮ್ಮ ಕಮಾಂಡಿಗ್ ಆಫೀಸರ್ ಸಾವನ್ನಪ್ಪಿರುವ ಮಾಹಿತಿ ನೀಡಿದೆ ಎಂಬ ವರದಿ ಬಹಿರಂಗಗೊಂಡಿದೆ. ಸಂಘರ್ಷದ ವೇಳೆ ಚೀನಾದ ಕೆಲ ಯೋಧರು ಹಾಗೂ ಕಮಾಂಡಿಗ್ ಆಫೀಸರ್ನನ್ನ ಭಾರತೀಯ ಯೋಧರು ಸೆರೆ ಹಿಡಿದಿದ್ದರು ಎನ್ನಲಾಗಿತ್ತು. ಆದರೆ ಇದಕ್ಕೆ ಸಂಬಂಧಿಸಿದಂತೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ.
ಘರ್ಷಣೆ ವೇಳೆ ಚೀನಾದ 45 ಯೋಧರು ಸಾವನ್ನಪ್ಪಿದ್ದಾರೆ ಎಂಬ ಮಾತು ಕೇಳಿ ಬಂದಿದ್ದು, ಇದರ ಬಗ್ಗೆ ಯಾವುದೇ ರೀತಿಯ ಖಚಿತ ಮಾಹಿತಿ ಇರಲಿಲ್ಲ. ಆದರೆ ಇದೀಗ ಕಮಾಂಡಿಗ್ ಆಫೀಸರ್ ಸಾವನ್ನಪ್ಪಿರುವ ಮಾಹಿತಿಯನ್ನು ಖುದ್ದಾಗಿ ಚೀನಾ ನೀಡಿದೆ ಎಂದು ತಿಳಿದು ಬಂದಿದೆ. ಸಂಘರ್ಷದ ವೇಳೆ ಭಾರತೀಯ ಸೇನೆಯ ಕರ್ನಲ್ ಸಂತೋಷ್ ಬಾಬು ಸೇರಿದಂತೆ 20 ಯೋಧರು ಹುತಾತ್ಮರಾಗಿದ್ದರು.