ಹೈದರಾಬಾದ್: ಜಗತ್ತಿನಾದ್ಯಂತ ಶೈಕ್ಷಣಿಕ ವ್ಯವಸ್ಥೆಯನ್ನೇ ಬದಲಿಸಿಬಿಟ್ಟಿದೆ ಕೋವಿಡ್-19. ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ, ದೋಷಗಳಿಲ್ಲದ ಯೋಜನೆಯೊಂದನ್ನು ಸಿದ್ಧಪಡಿಸಲು ದೇಶಗಳೆಲ್ಲ ಈಗ ಪರದಾಡುತ್ತಿವೆ. ಇಟಲಿ ಮತ್ತು ದಕ್ಷಿಣ ಕೊರಿಯಾ ದೇಶಗಳು ಆನ್‌ಲೈನ್ ತರಗತಿಗಳ ದಾರಿ ಅನುಸರಿಸಿದರೆ, ವಿಯೆಟ್ಮಾಂ ಮತ್ತು ಹಾಂಗ್‌ಕಾಂಗ್ ದೇಶಗಳು ತಮ್ಮ ಶಾಲೆಗಳನ್ನು ಭಾಗಶಃ ಮತ್ತೆ ತೆರೆದಿವೆ.
ಪ್ರಕರಣಗಳ ಸಂಖ್ಯೆಯಲ್ಲಿ ನಿರಂತರ ಏರಿಕೆಯಾಗುತ್ತಿರುವುದರಿಂದ, ಭಾರತದ ಶಾಲೆ ಮತ್ತು ಕಾಲೇಜುಗಳಲ್ಲಿ ತರಗತಿಗಳ ಬೋಧನೆಯನ್ನು ಮತ್ತೆ ಪ್ರಾರಂಭಿಸುವುದು ಸಾಧ್ಯವಿಲ್ಲ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಕೇಂದ್ರ ಮತ್ತು ರಾಜ್ಯದ ಶಾಲೆಗಳೆಲ್ಲ ಕಳೆದ ವರ್ಷದ ಪಠ್ಯಕ್ರಮವನ್ನು ಆನ್‌ಲೈನ್ ತರಗತಿಗಳ ಮೂಲಕವೇ ಮುಕ್ತಾಯಗೊಳಿಸಿವೆ. ಶಾಲೆಗಳು ಮತ್ತು ಕಿರಿಯ ಮಹಾವಿದ್ಯಾಲಯಗಳು ಯಾವುದೇ ಪರೀಕ್ಷೆಗಳನ್ನು ನಡೆಸದೇ ತಮ್ಮ ವಿದ್ಯಾರ್ಥಿಗಳಿಗೆ ಮುಂದಿನ ತರಗತಿಗೆ ಮುಂಬಡ್ತಿ ನೀಡಿವೆ.
ಉನ್ನತ ಕಲಿಕಾ ಸಂಸ್ಥೆಗಳು ತಮ್ಮ ಮುಂದಿನ ಕ್ರಮ ಏನಿರಬೇಕೆಂಬುದನ್ನು ಇನ್ನೂ ನಿರ್ಧರಿಸಬೇಕಿದೆ. ಶಾಲೆಗಳು ಮತ್ತು ಕಾಲೇಜುಗಳನ್ನು ಪುನರಾರಂಭಿಸಬೇಕೆಂದು ಕೇಂದ್ರ ಮತ್ತು ರಾಜ್ಯ ಸರಕಾರಗಳು ನಿರ್ಧರಿಸಿದಾಗ್ಯೂ, ಮರುಪ್ರಾರಂಭದ ದಿನಾಂಕಗಳು ಮುಂದೂಡಲ್ಪಡುತ್ತಲೇ ಇವೆ. ಸುರಕ್ಷಿತ ಮತ್ತು ಪರಿಣಾಮಕಾರಿ ಕಲಿಕಾ ಅನುಭವಕ್ಕಾಗಿ, ಡಿಜಿಟಲ್ ಮತ್ತು ತರಗತಿಗಳ ಬೋಧನೆಗಳನ್ನು ಜಂಟಿಯಾಗಿ ಅನುಸರಿಸುವ ಸಲಹೆಯನ್ನು ತಜ್ಞರು ಮುಂದಿಟ್ಟಿದ್ದಾರೆ.
ಆನ್‌ಲೈನ್ ಕಲಿಕೆಯು ಸಾಂಪ್ರದಾಯಿಕ ಕಲಿಕೆಗಿಂತ ಭಿನ್ನವಾಗಿರುವಂಥದು. ಪ್ರಸಕ್ತ ಪಠ್ಯಕ್ರಮವನ್ನು ಯಥಾವತ್ತಾಗಿ ಅನುಸರಿಸುವುದರಿಂದ ವಾಸ್ತವಿಕ ಅವಶ್ಯಕತೆಗಳನ್ನು ಅದು ಈಡೇರಿಸಲಾರದು. ಹೀಗಾಗಿ ಪಠ್ಯಕ್ರಮ ಮತ್ತು ತರಗತಿಯ ಯೋಜನೆಗಳನ್ನು ಬದಲಿಸುವುದೇ ಔಚಿತ್ಯಪೂರ್ಣ. ಸಿಬಿಎಸ್‌ಇ ಪಠ್ಯಕ್ರಮವನ್ನು ಈ ಪ್ರಕಾರ ಬದಲಿಸಲಾಗುವುದೆಂದು ಶಿಕ್ಷಣ ಸಚಿವಾಲಯವು ಇತ್ತೀಚೆಗೆ ಘೋಷಣೆ ಮಾಡಿದೆ. ಇದಕ್ಕೂ ಮುನ್ನ, ಪಠ್ಯಕ್ರಮವನ್ನು ಮತ್ತು ಬೋಧನಾ ತಾಸುಗಳನ್ನು ಮುಂದಿನ ಶೈಕ್ಷಣಿಕ ವರ್ಷದಿಂದ ಕಡಿಮೆ ಮಾಡಲಾಗುವುದು ಎಂದು ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ರಮೇಶ ಪೋಖ್ರಿಯಾಲ್ ಹೇಳಿದ್ದರು.
ಕರ್ನಾಟಕ ಸರಕಾರ ಸಹ ಶಾಲಾ ಪಠ್ಯಕ್ರಮವನ್ನು ಕಡಿತಗೊಳಿಸಲು ಗಂಭೀರ ಚಿಂತನೆ ನಡೆಸಿದೆ. ಹೀಗಿದ್ದಾಗ್ಯೂ, ಪಠ್ಯಕ್ರಮವನ್ನು ಕಡಿತಗೊಳಿಸುವುದರಿಂದ ಹಿನ್ನಡೆ ಉಂಟಾಗುವ ಸಾಧ್ಯತೆಗಳಿವೆ. ಅದರಲ್ಲಿಯೂ ಗಣಿತ ಮತ್ತು ಸಾಮಾನ್ಯ ವಿಜ್ಞಾನದಂತಹ ವಿಷಯಗಳಲ್ಲಿ, ಪ್ರತಿಯೊಂದು ಪಾಠವೂ ಮತ್ತೊಂದಕ್ಕೆ ನಂಟು ಹೊಂದಿರುವುದರಿಂದ ಈ ಅಪಾಯ ಹೆಚ್ಚು. ಹೀಗೆ ಒಂದಕ್ಕೊಂದು ಕೊಂಡಿ ಕಳಚುತ್ತ ಹೋದರೆ, ಪಾಠಗಳನ್ನು ಅರ್ಥ ಮಾಡಿಕೊಳ್ಳುವಲ್ಲಿ ವಿದ್ಯಾರ್ಥಿಗಳು ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಆದ್ದರಿಂದ, ಸ್ಥಳೀಯ ಮತ್ತು ಅಂತಾರಾಷ್ಟ್ರೀಯ ಮಾನದಂಡಗಳನ್ನು ಈಡೇರಿಸಬಲ್ಲಂತಹ ಪಠ್ಯಕ್ರಮವನ್ನು ತಜ್ಞರು ಪರಿಷ್ಕರಿಸಬೇಕಿದೆ.
ಆನ್‌ಲೈನ್ ಶಿಕ್ಷಣ ಕ್ಷೇತ್ರವೂ ಇನ್ನೂ ಶೈಶವಾಸ್ಥೆಯಲ್ಲಿದೆ. ಶಿಕ್ಷಕರ ದೈಹಿಕ ಹಾಜರಿ, ಮಾರ್ಗದರ್ಶನ ಮತ್ತು ಪ್ರೋತ್ಸಾಹ ವಿದ್ಯಾರ್ಥಿಗಳ ಮೇಲೆ ದೊಡ್ಡ ಮಟ್ಟದ ಪರಿಣಾಮವನ್ನು ಬೀರುತ್ತದೆ. ಆನ್‌ಲೈನ್ ತರಗತಿಗಳಲ್ಲಿ ವಿದ್ಯಾರ್ಥಿ-ಶಿಕ್ಷಕರ ನಡುವೆ ಆತ್ಮೀಯತೆಯ ಕೊರತೆ ಇರುತ್ತದೆ. ಬೋಧಕರ ಮೇಲುಸ್ತುವಾರಿ ಇಲ್ಲದೇ ವಿಷಯಾಧರಿತ ಪ್ರಶ್ನೆಗಳನ್ನು ಪರಿಹರಿಸುವುದು ವಿದ್ಯಾರ್ಥಿಗಳಿಗೆ ಸುಲಭ ಸಾಧ್ಯವಾಗದು. ಡಿಜಿಟಲ್ ಬೋಧನೆಯಲ್ಲಿ ಎಲ್ಲಾ ವಿದ್ಯಾರ್ಥಿಗಳೊಂದಿಗೆ ಸಮನ್ವಯತೆ ಸಾಧಿಸುವುದು ಶಿಕ್ಷಕರಿಗೆ ಕಷ್ಟವಾಗುತ್ತದೆ.
ಈ ಎಲ್ಲಾ ಮಿತಿಗಳ ಹಿನ್ನೆಲೆಯಲ್ಲಿ, ಇ-ಕಲಿಕಾ ವೇದಿಕೆಗಳನ್ನು ಸುಧಾರಿಸುವತ್ತ ತಜ್ಞರು ತಕ್ಷಣ ಗಮನವನ್ನು ಕೇಂದ್ರೀಕರಿಸಬೇಕಿದೆ. ವಿದ್ಯಾರ್ಥಿಗಳ ಕ್ರಿಯಾಶೀಲತೆಯನ್ನು ಮತ್ತು ಸಂಪನ್ಮೂಲತೆಯನ್ನು ವೃದ್ಧಿಸುವಂತಹ ಚಟುವಟಿಕೆಗಳನ್ನು ಅವರಿಗೆ ನೀಡಬೇಕು. ಹಂತಗಳನ್ನು ನಿರ್ಧರಿಸುವಾಗ ಈ ಚಟುವಟಿಕೆಗಳನ್ನು ಎಚ್ಚರಿಕೆಯಿಂದ ಬಳಸಬೇಕು. ಡಿಜಿಟಲ್ ಶಿಕ್ಷಣದಲ್ಲಿ, ಶಿಕ್ಷಕರು ಮತ್ತು ವಿದ್ಯಾರ್ಥಿಗಳ ನಡುವೆ ಹೊಂದಿಕೊಳ್ಳಬಲ್ಲ ವಾತಾವರಣ ಹಾಗೂ ಸನ್ನದ್ಧತೆ ಅತ್ಯಂತ ಮಹತ್ವಪೂರ್ಣದ್ದಾಗುತ್ತದೆ.
ಹಲವಾರು ವಿಶ್ವವಿದ್ಯಾಲಯಗಳು ಮತ್ತು ಶಾಲೆಗಳು ಆನ್‌ಲೈನ್ ತರಗತಿಗಳನ್ನು ನಡೆಸುತ್ತಿದ್ದರೂ, ಹಲವಾರು ಸಾಮಾಜಿಕ-ಆರ್ಥಿಕ ಸವಾಲುಗಳನ್ನು ಕಡೆಗಣಿಸುವುದು ಕಂಡುಬರುತ್ತಿದೆ. ನಗರ ಪ್ರದೇಶದ ಮಕ್ಕಳು ಡಿಜಿಟಲ್ ಸಾಧನಗಳ ಬಳಕೆಯಲ್ಲಿ ಯಾವುದೇ ಸಮಸ್ಯೆಗಳನ್ನು ಎದುರಿಸುತ್ತಿಲ್ಲವಾದರೂ, ವಿದ್ಯುತ್ ಮತ್ತು ಇಂಟರ್‌ನೆಟ್‌ನಂತಹ ಮೂಲ ಅವಶ್ಯಕತೆಗಳನ್ನು ಪಡೆದುಕೊಳ್ಳುವಲ್ಲಿ ಗ್ರಾಮೀಣ ಪ್ರದೇಶದ ಅವರ ಸಹಪಾಠಿಗಳು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ.
ಆದ್ದರಿಂದ, ಆನ್‌ಲೈನ್ ಕಲಿಕೆಗಾಗಿ ಇಂಟರ್‌ನೆಟ್ ಮತ್ತು ಟ್ಯಾಬ್ಲೆಟ್‌ಗಳನ್ನು ಒದಗಿಸಿಕೊಡುವತ್ತ ಸರಕಾರ ಗಮನ ಕೇಂದ್ರೀಕರಿಸಬೇಕು. ಇನ್ನು, ವೈಕಲ್ಯತೆಗಳನ್ನು ಹೊಂದಿರುವ ವಿದ್ಯಾರ್ಥಿಗಳು ಎದುರಿಸುತ್ತಿರುವ ಅಡೆತಡೆಗಳು ಬೇರೆ ರೀತಿಯವು. ಬಹುತೇಕ ಸಂದರ್ಭಗಳಲ್ಲಿ, ಬೋಧನಾ ವಸ್ತುಗಳನ್ನು ಪಡೆದುಕೊಳ್ಳುವುದು ಅವರಿಗೆ ಅಸಾಧ್ಯವೇ ಆಗಿರುತ್ತದೆ. ಆದ್ದರಿಂದ ವಿಶ್ವವಿದ್ಯಾಲಯಗಳು ಮತ್ತು ಶೈಕ್ಷಣಿಕ ಸಂಸ್ಥೆಗಳು ಅವರ ಸವಾಲುಗಳನ್ನು ಗಮನದಲ್ಲಿ ಇರಿಸಿಕೊಂಡು, ಅವರು ಕೂಡಾ ಇತರ ವಿದ್ಯಾರ್ಥಿಗಳ ಜೊತೆಗೆ ಸಮಾನವಾಗಿ ಪಾಲ್ಗೊಳ್ಳುವಂತೆ ನೋಡಿಕೊಳ್ಳಬೇಕಿದೆ.
ಅದೇ ರೀತಿ ಶಿಕ್ಷಣ ಸಚಿವಾಲಯವು ರೇಡಿಯೋ ಮತ್ತು ಟಿವಿ ಪ್ರಸಾರಗಳನ್ನು ಶೈಕ್ಷಣಿಕ ಸಾಧನಗಳಾಗಿ ಪರಿಗಣಿಸಬೇಕಿದೆ. ಈ ಮಾಧ್ಯಮಗಳಲ್ಲಿ ಪರಸ್ಪರ ಸಂವಹನದ ಅವಕಾಶ ಶೂನ್ಯವಾಗಿದ್ದರೂ, ಲಕ್ಷಾಂತರ ವಿದ್ಯಾರ್ಥಿಗಳು ಉಚಿತವಾಗಿ ಇಂತಹ ತರಗತಿಗಳನ್ನು ಹೊಂದಬಹುದಾಗಿದೆ. ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಆನ್‌ಲೈನ್ ಶಿಕ್ಷಣವು ಕಿರಿಕಿರಿ ಇಲ್ಲದೇ ನಡೆಯಬೇಕೆಂದರೆ, ಸರಕಾರಗಳು, ಶಿಕ್ಷಕರು ಮತ್ತು ಪೋಷಕರು ಪರಸ್ಪರ ಸಹಕಾರ ನೀಡುವ ಮೂಲಕ ತಮ್ಮ ಜವಾಬ್ದಾರಿಯನ್ನು ನಿಭಾಯಿಸಲೇಬೇಕು.