ನವದೆಹಲಿ: ಕೊರೊನಾ ಹಾವಳಿ ನಡುವೆ ಪ್ರಸ್ತುತ ದೇಶಾದ್ಯಂತ ಸಂಚಲನ ಮೂಡಿಸುತ್ತಿರುವ ಡ್ರಗ್ಸ್ ಮಾಫಿಯಾ ಕುರಿತು ಸಂಸತ್ ಮುಂಗಾರು ಅಧಿವೇಶನದಲ್ಲಿ ನಟ ಹಾಗೂ ಬಿಜೆಪಿ ಸಂಸದ ರವಿ ಕಿಶನ್ ಮಾತನಾಡಿದ್ದಾರೆ.
ನಮ್ಮ ದೇಶದಲ್ಲಿ ಮಾದಕವಸ್ತು ಕಳ್ಳಸಾಗಣೆ ಹಾಗೂ ಮಾದಕ ವ್ಯಸನದ ಸಮಸ್ಯೆ ಹೆಚ್ಚುತ್ತಿದೆ. ದೇಶದ ಯುವಕರನ್ನು ನಾಶಮಾಡಲು ಪಿತೂರಿ ನಡೆಸಲಾಗುತ್ತಿದ್ದು, ಇದಕ್ಕೆ ನಮ್ಮ ನೆರೆಯ ರಾಷ್ಟ್ರಗಳು ಕೊಡುಗೆ ನೀಡುತ್ತಿರುವುದು ದುರದೃಷ್ಟಕರ ಸಂಗತಿಯಾಗಿದೆ. ಪಂಜಾಬ್ ಮತ್ತು ನೇಪಾಳ ಮಾರ್ಗಗಳ ಮೂಲಕ ಪಾಕಿಸ್ತಾನ ಮತ್ತು ಚೀನಾದಿಂದ ಪ್ರತಿ ವರ್ಷವೂ ನಮ್ಮ ದೇಶಕ್ಕೆ ಮಾದಕವಸ್ತು ಕಳ್ಳಸಾಗಣೆಯಾಗುತ್ತಿದೆ ಎಂದು ರವಿ ಕಿಶನ್ ಆರೋಪಿಸಿದ್ದಾರೆ.
ಇದನ್ನೂ ಓದಿ: ಸುಶಾಂತ್ ಡೆತ್ ಕೇಸ್: ಎನ್‌ಸಿಬಿ ದಾಳಿಯಲ್ಲಿ 6 ಮಂದಿ ಡ್ರಗ್ ಪೆಡ್ಲರ್ಸ್ ಅರೆಸ್ಟ್
ನಮ್ಮ ಚಿತ್ರರಂಗದಲ್ಲೂ ಮಾದಕ ವ್ಯಸನವಿದೆ. ಇದಕ್ಕೆ ಸಂಬಂಧಿಸಿದಂತೆ ಹಲವಾರು ಜನರನ್ನು ಬಂಧಿಸಲಾಗಿದ್ದು, ಎನ್‌ಸಿಬಿ ಬಹಳ ಒಳ್ಳೆಯ ಕೆಲಸ ಮಾಡುತ್ತಿದೆ. ಈ ಸಂಬಂಧ ಕಠಿಣ ಕ್ರಮ ಕೈಗೊಂಡು ಅಪರಾಧಿಗಳನ್ನು ಶೀಘ್ರದಲ್ಲೇ ಬಂಧಿಸಿ, ಕಠಿಣ ಶಿಕ್ಷೆಯನ್ನು ನೀಡಬೇಕು ಹಾಗೂ ನೆರೆಯ ರಾಷ್ಟ್ರಗಳ ಪಿತೂರಿಯನ್ನು ಕೊನೆಗೊಳಿಸಬೇಕೆಂದು ನಾನು ಸರ್ಕಾರದ ಬಳಿ ಮನವಿ ಮಾಡುತ್ತೇನೆ ಎಂದು ರವಿ ಕಿಶನ್ ಅಧಿವೇಶನದಲ್ಲಿ ಹೇಳಿದರು.
ನಟಿ ರಿಯಾ ಚಕ್ರವರ್ತಿ ಹಾಗೂ ಸಹೋದರ ಶೋವಿಕ್ ಬಂಧನ ಬಳಿಕ, ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣದಲ್ಲಿ ಡ್ರಗ್ಸ್ ಲಿಂಕ್ ಕುರಿತ ತನಿಖೆ ಸಂಬಂಧ ಎನ್‌ಸಿಬಿ ಎರಡೇ ದಿನಗಳಲ್ಲಿ ಆರು ಮಂದಿ ಡ್ರಗ್ಸ್ ಪೆಡ್ಲರ್ಗಳನ್ನು ಬಂಧಿಸಿದೆ.