ತಿರುವನಂತಪುರಂ: ಕೊರೊನಾ ವೈರಸ್ನಿಂದಾಗಿ ಲಾಕ್‌ಡೌನ್ ಜಾರಿಯಾದ ಮೇಲೆ ಕೇರಳದಲ್ಲಿ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳ ಹೊರ ರೋಗಿಗಳ ವಿಭಾಗದಲ್ಲಿ ರೋಗಿಗಳ ಸಂಖ್ಯೆ ಇಳಿಕೆಯಾಗಿತ್ತು. ಆದ್ರೀಗ ಕೇರಳದಲ್ಲಿ ಅಪರಾದ ಪ್ರಕರಣಗಳೂ ಗಣನೀಯವಾಗಿ ಕಡಿಮೆಯಾಗಿದೆ ಎಂದು ಪೊಲೀಸ್ ಇಲಾಖೆ ಮಾಹಿತಿ ನೀಡಿದೆ. ಲಾಕ್‌ಡೌನ್ ಅವಧಿಯಲ್ಲಿ ಕ್ರೈಮ್ ಪ್ರಕರಣಗಳು ಕಳೆದ ವರ್ಷಕ್ಕೆ ಹೋಲಿಸಿದಾಗ ಪ್ರಮಾಣ ಕಡಿಮೆಯಾಗಿದೆ ಎಂದು ರಾಜ್ಯ ಅಪರಾಧ ದಾಖಲೆಗಳ ಬ್ಯೂರೋ ಸಿದ್ಧಪಡಿಸಿರುವ ವರದಿಯಲ್ಲಿ ತಿಳಿದು ಬಂದಿದೆ.
2019ರ ಮಾರ್ಚ್ 25 ರಿಂದ ಮಾರ್ಚ್ 31ರವರೆಗೆ 12 ದರೋಡೆ ಪ್ರಕರಣಗಳು ನಡೆದಿವೆ. ಆದರೆ, ಈ ವರ್ಷ ಲಾಕ್ ಡೌನ್ ಅವಧಿಯಲ್ಲಿ ಈ ಸಂಖ್ಯೆ 2ಕ್ಕೆ ಇಳಿದಿದೆ ಎಂದು ಹೇಳಿದೆ. ಇನ್ನು 2020ರ ಮಾರ್ಚ್ 25ರಿಂದ ಮಾರ್ಚ್ 31 ರವರೆಗೆ 18 ಕಿರುಕುಳ ಪ್ರಕರಣಗಳು ವರದಿಯಾಗಿವೆ. ಆದರೆ, ಕಳೆದ ವರ್ಷ ಇದೇ ಅವಧಿಯಲ್ಲಿ 92 ಪ್ರಕರಣಗಳು ದಾಖಲಾಗಿವೆ. ಆದರೆ, ಕೊಲೆ ಪ್ರಕರಣಗಳಲ್ಲಿ ಹೆಚ್ಚಿನ ಇಳಿಕೆ ಕಂಡುಬಂದಿಲ್ಲ ಎಂದು ಮಾಹಿತಿ ನೀಡಿದೆ.
2020ರ ಮಾರ್ಚ್‌ನಲ್ಲಿ ಒಟ್ಟು 7 ದಿನಗಳ ಲಾಕ್‌ಡೌನ್‌ನಲ್ಲಿ 4 ಕೊಲೆ ಪ್ರಕರಣಗಳು ವರದಿಯಾಗಿದ್ದು, ಕಳೆದ ವರ್ಷ ಈ ಅವಧಿಯಲ್ಲಿ 6 ಪ್ರಕರಣಗಳು ದಾಖಲಾಗಿವೆ.
ಕೊಲೆಯಂತಹ ಅಪರಾಧಗಳನ್ನು ತಡೆಗಟ್ಟುವುದು ಕಷ್ಟ, ಏಕೆಂದರೆ ಇದು ವಿವಿಧ ವೈಯಕ್ತಿಕ ಕಾರಣಗಳಿಂದ ಉಂಟಾಗುವ ಸ್ವಯಂಪ್ರೇರಿತ ಅಪರಾಧವಾಗಿದೆ. ಆದರೆ ಕಳ್ಳತನ, ಗಲಭೆ ಪ್ರಕರಣಗಳು, ಅತ್ಯಾಚಾರ, ಅಪಹರಣ ಮತ್ತು ಮೋಸ ಪ್ರಕರಣಗಳ ಸಂಖ್ಯೆಯಲ್ಲಿ ಭಾರಿ ಇಳಿಕೆ ಕಂಡುಬಂದಿದೆ ಎಂದು ಎಸ್‌ಸಿಆರ್‌ಬಿಯ ಹಿರಿಯ ಅಧಿಕಾರಿ ಹೇಳಿದ್ದಾರೆ.
ಈ ವರ್ಷ ಲಾಕ್‌ಡೌನ್ ಅವಧಿಯಲ್ಲಿ ರಸ್ತೆ ಅಪಘಾತದಿಂದಾಗಿ 15 ಸಾವುಗಳು ಸಂಭವಿಸಿವೆ ಆದರೆ, ಕಳೆದ ವರ್ಷ ಇದೇ ಅವಧಿಯಲ್ಲಿ ಸಾವಿನ ಸಂಖ್ಯೆ 181ಕ್ಕೆ ತಲುಪಿತ್ತು ಎಂದು ವರದಿಯಲ್ಲಿ ತಿಳಿದುಬಂದಿದೆ.