ಕೋಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ಕಂದಾಯ ಗುಪ್ತಚರ ನಿರ್ದೇಶನಾಲಯ ನಡೆಸಿದ ಎರಡು ಪ್ರತ್ಯೇಕ ಕಾರ್ಯಾಚರಣೆಯಲ್ಲಿ ಸುಮಾರು 6.22 ಕೋಟಿ ರೂ. ಮೌಲ್ಯದ, 12 ಕೆಜಿ ಕಳ್ಳಸಾಗಣೆ ಚಿನ್ನವನ್ನು ವಶಪಡಿಸಿಕೊಂಡಿದ್ದು, ಐವರನ್ನ ಬಂಧಿಸಿದೆ.
ನಿರ್ದಿಷ್ಟ ಮಾಹಿತಿಯ ಆಧಾರದ ಮೇಲೆ, ಡಿಆರ್‌ಐ ಅಧಿಕಾರಿಗಳು ಕೋಲ್ಕತ್ತಾದಲ್ಲಿ ಮತ್ತು ಉತ್ತರ ಬಂಗಾಳದ ಸಿಲಿಗುರಿಯಲ್ಲಿ ಕರ್ಯಾಚರಣೆ ನಡೆಸಿದ್ದಾರೆ. ಕೋಲ್ಕತ್ತಾ ಮತ್ತು ಸಿಲಿಗುರಿಯಿಂದ ಕ್ರಮವಾಗಿ 6.882 ಕೆಜಿ ಮತ್ತು 4.980 ಕೆಜಿ ಕಳ್ಳಸಾಗಣೆ ಚಿನ್ನವನ್ನು ವಶಪಡಿಸಿಕೊಂಡಿದ್ದಾರೆ.
ಕೋಲ್ಕತ್ತಾದಲ್ಲಿ ಕಾರನ್ನು ಬೆನ್ನಟ್ಟಿ ತಡೆದ ಅಧಿಕಾರಿಗಳು, 3.62 ಕೋಟಿ ರೂಪಾಯಿ ಮೌಲ್ಯದ 6.882 ಕೆಜಿ ತೂಕದ 42 ಚಿನ್ನದ ಬಿಸ್ಕತ್ತು ವಶಪಡಿಸಿಕೊಂಡಿದ್ದಾರೆ. ವಿಚಾರಣೆಯ ವೇಳೆ ಕಾರಿನ ಮಾಲೀಕನು ಬಾಂಗ್ಲಾದೇಶದಿಂದ ಕಳ್ಳಸಾಗಣೆ ಮಾಡಿ ಚಿನ್ನವನ್ನು ಸಾಗಿಸುತ್ತಿರುವುದನ್ನು ಒಪ್ಪಿಕೊಂಡಿದ್ದಾನೆ.
ಎರಡನೇ ಕಾರ್ಯಾಚರಣೆಯಲ್ಲಿ, ಡಿಆರ್‌ಐ ಸಿಲಿಗುರಿಯ ಡಾರ್ಜಿಲಿಂಗ್ ಮೋರ್ ಬಳಿ ಕಾರನ್ನು ತಡೆದಾಗ ಅದರೊಳಗೆ 2.60 ಕೋಟಿ ರೂ. ಮೌಲ್ಯದ 4.980 ಕೆಜಿ ತೂಕದ 30 ಚಿನ್ನದ ಬಿಸ್ಕತ್ತನ್ನು ವಶಪಡಿಸಿಕೊಳ್ಳಲಾಗಿದ್ದು, ಮಣಿಪುರದ ಇಬ್ಬರು ವ್ಯಕ್ತಿಗಳನ್ನು ಬಂಧಿಸಲಾಗಿದೆ ಎಂದು ಕಂದಾಯ ಗುಪ್ತಚರ ನಿರ್ದೇಶನಾಲಯ ತಿಳಿಸಿದೆ.