ಪುಣೆ(ಮಹಾರಾಷ್ಟ್ರ): ಭಾರತದ ಕೊರೊನಾ ಲಸಿಕೆ ಕೋವಿಶೀಲ್ಡ್ ಉತ್ಪಾದನಾ ಕೇಂದ್ರ ಪುಣೆಯಲ್ಲಿನ ಸೀರಂ ಇನ್‌ಸ್ಟಿಟ್ಯೂಟ್‌ನಲ್ಲಿ ಗುರುವಾರ ಸಂಭವಿಸಿದ ಅಗ್ನಿ ದುರಂತದಲ್ಲಿ ಐವರು ಮೃತಪಟ್ಟಿದ್ದಾರೆ. ಮೃತರ ಪೈಕಿ ಪ್ರತೀಕ್ ಪಾಷ್ಟೆ ಕೂಡ ಒಬ್ಬರು.
ಪ್ರತೀಕ್ ಪಾಷ್ಟೆ ಮಧ್ಯಮ ಕುಟುಂಬದಿಂದ ಬಂದ ಯುವಕ. ತಾಯಿ ಟೀ ಸ್ಟಾಲ್ ಇಟ್ಟುಕೊಂಡು ಮಗನ ವಿದ್ಯಾಭ್ಯಾಸ ಮಾಡಿಸಿದ್ದರು. ತಂದೆಯನ್ನು ಅನಾರೋಗ್ಯದ ಕಾರಣ ಆಸ್ಪತ್ರೆಗೆ ದಾಖಲಿಸಲಾಗಿದೆ. ತಾಯಿಯ ಆಶ್ರಯದಲ್ಲೇ ಬೆಳೆದ ಪ್ರತೀಕ್ ಇತ್ತೀಚೆಗಷ್ಟೇ ವಿದ್ಯಾಭ್ಯಾಸ ಮುಗಿಸಿದ್ದಾನೆ. ಬಳಿಕ ಸೀರಂನಲ್ಲಿ ಎಲೆಕ್ಟ್ರೀಷಿಯನ್ ಆಗಿ ಕೆಲಸಕ್ಕೆ ಸೇರಿಕೊಂಡಿದ್ದ. ಸಂಸ್ಥೆಯಲ್ಲಿ ಸೀನಿಯರ್ ಆಗಿರುವ ಮಹೇಂದ್ರ ಇಂಗ್ಲೆಯವರ ಜತೆ ಎಲೆಕ್ಟ್ರಿಕಲ್ ಕೆಲಸಕ್ಕಾಗಿ ಆಸ್ಪತ್ರೆಗೆ ಬಂದ ವೇಳೆ ಅಗ್ನಿ ಅನಾಹುತ ಸಂಭವಿಸಿತ್ತು.
ಮಗನ ಸಾವಿನ ವಿಷಯ ತಿಳಿದ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು, ಆತನೊಂದಿಗೆ ನಮ್ಮ ಕನಸುಗಳೆಲ್ಲ ಕಮರಿ ಹೋದವು ಎಂದು ಕಣ್ಣೀರು ಹಾಕುತ್ತಿದ್ದಾರೆ.
ಘಟನೆಗೆ ವಿಷಾದ ವ್ಯಕ್ತಪಡಿಸಿರುವ ಸೀರಂನ ವ್ಯವಸ್ಥಾಪಕ ನಿರ್ದೇಶಕ ಸೈರಸ್ ಪುನವಾಲಾ, ಮೃತರಿಗೆ ತಲಾ 25 ಲಕ್ಷ ರೂ.ಪರಿಹಾರ ಘೋಷಿಸಿದ್ದಾರೆ.