ನವದೆಹಲಿ: ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ.ಹರ್ಷವರ್ಧನ್ ಅವರು ದೆಹಲಿಯ ಲೆಫ್ಟಿನೆಂಟ್ ಗವರ್ನರ್ ಅನಿಲ್ ಬೈಜಾಲ್, ದೆಹಲಿಯ ಆರೋಗ್ಯ ಸಚಿವ ಸತ್ಯೇಂದ್ರ ಕುಮಾರ್ ಜೈನ್, ಹಿರಿಯ ಅಧಿಕಾರಿಗಳು, ಮೇಯರ್‌ಗಳು, ಪುರಸಭೆ ಆಯುಕ್ತರು ಮತ್ತು ದೆಹಲಿಯ ಜಿಲ್ಲಾಧಿಕಾರಿಗಳ ಜೊತೆ ಚರ್ಚೆ ನಡೆಸಿದರು.
ಕೋವಿಡ್ ವಿರುದ್ಧ ಹೋರಾಡಲು ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು, ಸ್ಯಾನಿಟೈಸರ್ನಿಂದ ಕೈತೊಳೆಯುವ ಕುರಿತು ಜನರಲ್ಲಿ ಅರಿವು ಮೂಡಿಸಲು ಪ್ರಧಾನಿ ಮೋದಿ ಜನ್ ಅಂದೋಲನ್ನನ್ನು ಪ್ರಾರಂಭಿಸಿದ್ದಾರೆ. ಇದು ಉತ್ತಮ ಕಾರ್ಯವಾಗಿದೆ. ಇದನ್ನು ಸರ್ಕಾರ ಅನುಷ್ಠಾನಗೊಳಿಸುವುದು ಒಳ್ಳೆಯದು. ಇದರ ಮೂಲಕ ನಾವು ಕೊರೊನಾ ವಿರುದ್ಧ ಹೋರಾಡಿ, ದೇಶದಿಂದ ಓಡಿಸಲು ಸಹಾಯಕಾರಿಯಾಗಿದೆ ಎಂದು ಇದೇ ವೇಳೆ ಅಧಿಕಾರಿಗಳಿಗೆ ಸೂಚಿಸಿದರು.
ಜನಸಾಮಾನ್ಯರಲ್ಲಿ ಕೋವಿಡ್ ಬಗ್ಗೆ ಅರಿವು ಮೂಡಿಸಲು ಮತ್ತು ರೋಗದ ವೇಗವನ್ನು ವರ್ಷದ ಅಂತ್ಯದ ವೇಳೆಗೆ ಮಟ್ಟಹಾಕಲು ಕ್ರಮಗಳನ್ನು ತೆಗೆದುಕೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಅಲ್ಲದೇ 2021 ರ ಮಧ್ಯಭಾಗದಲ್ಲಿ 20-25 ಕೋಟಿ ನಾಗರಿಕರಿಗೆ ಲಸಿಕೆ ಸಿಗಲಿದೆ ಎಂದು ಹೇಳಿದರು.
“ಭಾರತದ ಚೇತರಿಕೆ ಪ್ರಮಾಣವು ಪ್ರಸ್ತುತ ಶೇ.92ರಷ್ಟು ಇದೆ. ಇದರಲ್ಲಿ ದೆಹಲಿಯ ಪ್ರಮಾಣ ಶೇ.89ರಷ್ಟಿದೆ. ರಾಷ್ಟ್ರೀಯ ಪ್ರಕರಣದಲ್ಲಿ ಸಾವಿನ ಪ್ರಮಾಣ ಶೇ.1.49ರಷ್ಟಿದ್ದು, ಅದರಲ್ಲಿ ದೆಹಲಿಯಲ್ಲಿ ಶೇ.1.71ರಷ್ಟು ಇದೆ ” ಎಂದು ಸಚಿವರು ಹೇಳಿದ್ದಾರೆ.