ಅಮರಾವತಿ (ಆಂಧ್ರಪ್ರದೇಶ): ಮೊದಲೇ ಕೊರೊನಾ.. ಮುಂಜಾಗೃತೆಗಾಗಿ ರಕ್ಷಣಾ ಪರಿಕರಗಳು ಬೇಕ ಎಂದಿದ್ದಾರೆ ಒಬ್ಬ ವೈದ್ಯರು. ಎನ್-95 ಮಾಸ್ಕ್‌ಗಳನ್ನು ಯಾಕೆ ಕೊಡುತ್ತಿಲ್ಲ ಎಂದು ಸರ್ಕಾರವನ್ನು ಪ್ರಶ್ನಿಸಿದ ಪರಿಣಾಮ ಈತನ ಜೀವನ ದುರಂತಕ್ಕೆ ತಳ್ಳಲ್ಪಟ್ಟಿದೆ. ರಸ್ತೆಯಲ್ಲಿ ಅರೆನಗ್ನನಾಗಿ ಅಲೆಯುವಂತಾಗಿದೆ. ಕೊನೆಗೆ ಈತನಿಗೆ ಮಾಸಿಕ ಸ್ಥಿತಿ ಸರಿಯಿಲ್ಲ ಎಂದು ಮುದ್ರೆ ಒತ್ತಲಾಗಿದೆ. ಇಷ್ಟಕ್ಕೂ ಆಂಧ್ರಪ್ರದೇಶದ ವಿಶಾಖಪಟ್ಟಣಂ ವೈದ್ಯ ಸುಧಾಕರ್ ಜೀವನದಲ್ಲಿ ನಡೆದಿರುವ ಆ ವಿಷಾದಕರ ಘಟನೆಗಳು ಏನು..?
ಮಾಸ್ಕ್ ಕೇಳಿದ್ದು ತಪ್ಪು ಎಂದ್ರು!
ಆಂಧ್ರಪ್ರದೇಶದ ವಿಶಾಖಪಟ್ಟಣಂ ಜಿಲ್ಲೆಯ ನರ್ಸಿಪಟ್ಟಣದ ಪ್ರಾಥಮಿಕ ಆರೋಗ್ಯ ಕೇಂದ್ರ ವೈದ್ಯ ಸುಧಾಕರ್, ಕೊರೊನಾ ಸೋಂಕಿತರಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರಿಗೆ ಎನ್-95 ಮಾಸ್ಕ್ ಗಳು ಕೊಡುತ್ತಿಲ್ಲ ಎಂದು ಸರ್ಕಾರವನ್ನು ಟೀಕಿಸಿ, ಅನುಭವ ಇಲ್ಲದ ವೈದ್ಯರೊಂದಿಗೆ ಶಸ್ತ್ರಚಿಕಿತ್ಸೆ ಮಾಡಿಸಲಾಗುತ್ತಿದೆ ಎಂದಿದ್ದಾರೆ. ಜನಪ್ರತಿನಿಧಿಗಳು ಸಹಿತ ಆಸ್ಪತ್ರೆಗಳತ್ತ ಯಾರೂ ಗಮನ ಹರಿಸುತ್ತಿಲ್ಲ ಎಂದು ವಿಮರ್ಶಿಸಿದ್ದರು. ಈ ಹೇಳಿಕೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಇದರ ಪರಿಣಾಮವಾಗಿ 2020ರ ಏಪ್ರಿಲ್ 8 ರಂದು ವೈದ್ಯ ಸುಧಾಕರ್ ಅವರನ್ನು ಸಸ್ಪೆಂಡ್ ಮಾಡಿ ಆದೇಶ ಮಾಡಲಾಗಿತ್ತು. ಅಂದಿನಿಂದ ಡಾಕ್ಟರ್ ಸುಧಾಕರ್‌ಗೆ ಇನ್ನಿಲ್ಲದ ಕಷ್ಟಗಳು ಆರಂಭವಾಗಿವೆ.
ವಿಶಾಖಪಟ್ಟಣದಲ್ಲಿ ಬಂಧನ
2020ರ ಮೇ 16 ರಂದು ವಿಶಾಖಪಟ್ಟಣದ ಪೋರ್ಟ್ ಎಂಬ ಆಸ್ಪತ್ರೆ ಬಳಿ ಅರೆನಗ್ನನಾಗಿ ವೈದ್ಯ ಸುಧಾಕರ್ ಪ್ರತಿಭಟನೆ ಮಾಡಿದ್ದರು. ಗಲಾಟೆ ಮಾಡುತ್ತಿದ್ದಾರೆ ಎಂದು ಅಲ್ಲಿದ್ದವರು ದೂರು ನೀಡಿದ್ದರಿಂದ ಸ್ಥಳಕ್ಕೆ ಬಂದ ಪೊಲೀಸರು ಆತನನ್ನ ಹಗ್ಗದಲ್ಲಿ ಕಟ್ಟಿ ಪೊಲೀಸ್ ಠಾಣೆಗೆ ಕರೆದೊಯ್ಯಲಾಗಿದೆ. ಕೆಜಿಹೆಚ್ ಆಸ್ಪತ್ರೆಗೆ ದಾಖಲಿಸಿದಾಗ, ಸುಧಾಕರ್‌ಗೆ ಮಾನಸಿಕ ಸ್ಥಿತಿ ಸರಿಯಿಲ್ಲ ಎಂದು ಅಲ್ಲಿನ ವೈದ್ಯರು ಹೇಳಿದ್ದಾರೆ. ಪರಿಣಾಮ ಆತನನ್ನು ಮಾನಸಿಕ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸೆಕ್ಷನ್ 353, 427ರ ಅಡಿ ಪ್ರಕರಣ ದಾಖಲು ಮಾಡಿದ್ದಾರೆ. ಬಂಧನದ ವೇಳೆ ವೈದ್ಯನ ಮೇಲೆ ಪೊಲೀಸ್ ಪೇದೆ ಹಲ್ಲೆ ಮಾಡಿದ್ದ ವಿಡಿಯೋವೊಂದು ಬಹಿರಂಗವಾಗಿತ್ತು. ಮದ್ಯದ ಮತ್ತಿನಲ್ಲಿ ವೈದ್ಯ ಅವಾಂತರ ಸೃಷ್ಟಿಸಿದ್ದಾನೆ ಎಂದು ವಿಶಾಖಪಟ್ಟಣ ಪೊಲೀಸ್ ಕಮಿಷನರ್ ಆರ್.ಕೆ. ಮೀನಾ ಹೇಳಿಕೆ ನೀಡಿದ್ದಾರೆ. ಇನ್ನು, ವೈದ್ಯನ ಮೇಲೆ ಹಲ್ಲೆ ಮಾಡಿದ ಪೇದೆಯನ್ನು ಅಂದೇ ಅಮಾನತು ಮಾಡಲಾಗಿದೆ.
ನನ್ನ ಪುತ್ರನಿಗೆ ಪ್ರಾಣ ಬೆದರಿಕೆ
ಸುಧಾಕರ್ ತಾಯಿ ವಿಶಾಖಪಟ್ಟಣದ ಪೊಲೀಸ್ ಕಮಿಷನರ್ ಆರ್.ಕೆ.ಮೀನಾ ಅವರನ್ನು ಭೇಟಿ, ತನ್ನ ಪುತ್ರನಿಗೆ ಪ್ರಾಣಬೆದರಿಕೆ ಇದೆ ಎಂದು ದೂರಿದ್ದಾರೆ. ಕೋರ್ಟ್‌ಗೆ ಹಾಜರು ಪಡಿಸುವಾಗ ನನ್ನ ಮಗನಿಗೆ ಏನಾದ್ರೂ ಆಗಬಹುದು ಅಂತ ಕಣ್ಣೀರಿಟ್ಟಿದ್ದಾರೆ. ಪುತ್ರನನ್ನು ಕೋರ್ಟ್‌ಗೆ ಕರೆದೊಯ್ಯುವಾಗ ತಮ್ಮನ್ನು ಜೊತೆಯಲ್ಲಿ ಕರೆದುಕೊಂಡು ಹೋಗಬೇಕು ಎಂದು ಕಮಿಷನರ್ ಬಳಿ ಮನವಿ ಮಾಡಿದ್ದಾರೆ.
ರಾಜಕೀಯ ಪಕ್ಷಗಳ ಆಕ್ರೋಶ
ಆಸ್ಪತ್ರೆಗಳಲ್ಲಿ ಸರಿಯಾದ ಸೌಲಭ್ಯಗಳನ್ನು ಕೇಳಿದ ವೈದ್ಯನ ಬಂಧನವನ್ನು ಖಂಡಿರಿಸಿರುವ ಅಲ್ಲಿನ ವಿಪಕ್ಷಗಳು ಆಕ್ರೋಶ ವ್ಯಕ್ತಪಡಿಸಿವೆ. ವೈದ್ಯನ ಜೀವನವನ್ನ ನಾಶ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಸುಧಾಕರ್ ಅವರ ಈ ಸ್ಥಿತಿಯನ್ನು ಟಿಡಿಪಿ, ಬಿಜೆಪಿ, ಜನಸೇನಾ ತೀವ್ರವಾಗಿ ಖಂಡಿಸಿವೆ. ಪ್ರಕರಣದ ಬಗ್ಗೆ ಸಮಗ್ರ ವಿಚಾರಣೆ ನಡೆಸಬೇಕು ಎಂದು ಒತ್ತಾಯಿಸಿವೆ. ಅಧಿಕಾರದಲ್ಲಿರುವ ಪಕ್ಷ ಮಾತ್ರ ಆಂಧ್ರ ಮುಖ್ಯಮಂತ್ರಿಯನ್ನು ವೈದ್ಯ ಟೀಕಿಸಿದ್ದಾನೆ ಎಂದಿದೆ.
ಹೈಕೋರ್ಟ್ ಹೇಳಿದ್ದೇನು?
2020ರ ಮೇ 18 ರಂದು ಡಾಕ್ಟರ್ ಸುಧಾಕಾರ್ ಬಂಧನ ಸಂಬಂಧ ಹೈಕೋರ್ಟ್ ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆಯಾಗಿದೆ. ವೈದ್ಯನ ಹಕ್ಕುಗಳನ್ನು ಹತ್ತಿಕ್ಕುವ ಸಲುವಾಗಿ ಆತನನ್ನು ಅರೆನಗ್ನನ್ನಾಗಿ ಮಾಡಿ ಬಂಧಿಸಲಾಗಿದೆ ಎಂದು ಅರ್ಜಿದಾರರು ಕೋರ್ಟ್‌ಗೆ ಮನವರಿಕೆ ಮಾಡಿದ್ದಾರೆ. ಮತ್ತೊಂದೆಡೆ ಟಿಡಿಪಿ ಮಹಿಳಾ ನಾಯಕಿಯೊಬ್ಬರು ಇದೇ ವಿಚಾರವಾಗಿ ಹೈಕೋರ್ಟ್‌ಗೆ ಪತ್ರ ಬರೆದಿದ್ದಾರೆ. ಘಟನೆಗೆ ಸಂಬಂಧಿಸಿದ ದೃಶ್ಯಾವಳಿಗಳನ್ನೂ ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ. ಈ ವಿಡಿಯೋಗಳನ್ನು ಪರಿಶೀಲಿಸಿರುವ ಕೋರ್ಟ್, ಡಾ.ಸುಧಾಕರ್ ಪ್ರಕರಣವನ್ನು ಸುಮೋಟಾ ಕೇಸ್ ಎಂದು ಪರಿಗಣಿಸಿ ವೈದ್ಯನನ್ನು ಕೋರ್ಟ್‌ಗೆ ಹಾಜರು ಪಡಿಸುವಂತೆ ಸೂಚಿಸಿದೆ. ನಿನ್ನೆ ವಿಚಾರಣೆ ನಡೆಸಿರುವ ಕೋರ್ಟ್, ಸಂಪೂರ್ಣ ಮಾಹಿತಿಯೊಂದಿಗೆ ಪ್ರಕರಣ ದಾಖಲಿಸಬೇಕು ಎಂದು ಸರ್ಕಾರಕ್ಕೆ ಆದೇಶ ನೀಡಿದೆ. ಇಂದು ಸಂಜೆಯೊಳಗೆ ಸುಧಾಕರ್ ಅವರ ಹೇಳಿಕೆಯನ್ನು ದಾಖಲಿಸಿಕೊಳ್ಳಬೇಕು ಎಂದು ಸ್ಪಷ್ಟಪಡಿಸಿದೆ. ನಾಳೆ ಈ ಪ್ರಕರಣದ ಕುರಿತು ನ್ಯಾಯಾಧೀಶರು ವಿಚಾರಣೆ ನಡೆಸಲಿದ್ದಾರೆ.
ಜಗನ್‌ಗೆ ಐಎಂಎ ಪತ್ರ
2020ರ ಮೇ 19 ರಂದು ಡಾಕ್ಟರ್ ಸುಧಾಕರ್ ವಿಚಾರ ಸಂಬಂಧ ಸಿಎಂ ಜಗನ್ ಮೋಹನ್‌ರೆಡ್ಡಿಗೆ ಭಾರತೀಯ ವೈದ್ಯಕೀಯ ಸಂಸ್ಥೆ (ಐಎಂಎ) ಪತ್ರ ಬರೆದಿದೆ. ಸುಧಾಕರ್ ವಿಚಾರದಲ್ಲಿ ಪೊಲೀಸರು ಅಮಾನುಷವಾಗಿ ನಡೆದುಕೊಂಡಿದ್ದಾರೆ ಎಂದು ಪತ್ರದಲ್ಲಿ ಉಲ್ಲೇಖಿಸಿದೆ. ಸಿಎಂ ವಿರುದ್ಧ ವೈದ್ಯ ಮಾಡಿರುವ ಆರೋಪಗಳು ಸರಿಯಲ್ಲ ಎಂದು ಈತ ಹೀಗೆ ವರ್ತಿಸುವಂತೆ ಮಾಡಿ ಮನೋ ವೇದನೆ ಪಡುವಂತೆ ನೋಡಿಕೊಂಡಿದ್ದಾರೆ. ಪೊಲೀಸರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಐಎಂಎ ಒತ್ತಾಯಿಸಿದೆ. ಆಂಧ್ರ ಸರ್ಕಾರಿ ವೈದ್ಯರ ಸಂಘ ಕೂಡ ಆಕ್ರೋಶ ವ್ಯಕ್ತಪಡಿಸಿದೆ. ಸುಧಾಕರ್‌ಗೆ ನ್ಯಾಯ ಒದಗಿಸದಿದ್ರೆ ತಮ್ಮ ಮುಂದಿನ ನಿರ್ಧಾರವನ್ನು ತಿಳಿಸುವುದಾಗಿ ಸ್ಪಷ್ಟಪಡಿಸಿದ್ದಾರೆ.
ಪ್ರಸ್ತುತ ಡಾಕ್ಟರ್ ಸುಧಾಕರ್ ಮಾನಸಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸರಿಯಾದ ಸೌಲಭ್ಯಗಳು ಬೇಕು ಎಂದು ಪ್ರಶ್ನಿಸಿದ್ದಕ್ಕೆ ಸರ್ಕಾರಿ ವೈದ್ಯನ ಜೀವನ ಹೀಗೆ ಅಧೋಗತಿಗೆ ಹೋಗಿರುವುದು ದುರಂತವೇ ಸರಿ