ನವದೆಹಲಿ: ಬಿಹಾರ ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ, ಪ್ರಧಾನಿ ಮೋದಿ ಸರ್ಕಾರದ ವಿರುದ್ಧ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಹರಿಹಾಯ್ದಿದ್ದಾರೆ.
ಬಿಜೆಪಿ ಆಡಳಿತದ ಈ ವ್ಯವಸ್ಥೆಯಲ್ಲಿ ಪ್ರಜಾಪ್ರಭುತ್ವ ಅಪಾಯದಲ್ಲಿದೆ. ಆರ್ಥಿಕತೆ ನೆಲ ಕಚ್ಚಿದ್ದು, ಜನತೆ ಸಂಕಷ್ಟ ಅನುಭವಿಸುತ್ತಿದ್ದಾರೆ. ಬೆದರಿಕೆಗಳ ಮೂಲಕ ಅಭಿವ್ಯಕ್ತಿ ಸ್ವಾತಂತ್ರ್ಯ ಹತ್ತಿಕ್ಕುವ ಕೆಲಸ ನಡೆಯುತ್ತಿದೆ. ಭಿನ್ನಾಭಿಪ್ರಾಯಗಳನ್ನೇ ಭಯೋತ್ಪಾದನೆ ಎಂದು ಬಿಂಬಿಸಲಾಗ್ತಿದೆ ಎಂದು ಕೇಂದ್ರದ ವಿರುದ್ಧ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಹರಿಹಾಯ್ದಿದ್ದಾರೆ.
ರಾಷ್ಟ್ರೀಯ ಭದ್ರತೆ ವಿಚಾರ ಮುಂದಿಟ್ಟುಕೊಂಡು ಜನರಿಂದ ನೈಜ ಸಮಸ್ಯೆ ಮುಚ್ಚಿಡುವ ಪ್ರಯತ್ನ ಮಾಡಲಾಗುತ್ತಿದೆ. ರಾಷ್ಟ್ರೀಯ ಭದ್ರತಾ ವಿಚಾರವಾಗಿ ಬರುವ ಬೆದರಿಕೆ ಕರೆಗಳು ನಿಜವಾಗಿದ್ದರೆ, ಕೇಂದ್ರ ಸರ್ಕಾರ ಯಾವುದೇ ರಾಜಿಯಾಗದಂತೆ ವ್ಯವಹರಿಸಬೇಕು. ಆದರೆ, ಮೋದಿ ಸರ್ಕಾರ ಪ್ರತಿ ಸನ್ನಿವೇಶಗಳ ಹಿಂದೆ ರಾಜಕೀಯ ಪಿತೂರಿ ಮಾಡುತ್ತಿದೆ. ಈ ಮೂಲಕ ಭಾರತೀಯರು ಕಷ್ಟಪಟ್ಟು ಪಡೆದಿದ್ದ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬಿಜೆಪಿ ನಾಶ ಮಾಡುತ್ತಿದೆ.
ರಾಜಕೀಯ ವಿರೋಧವನ್ನು ಹತ್ತಿಕ್ಕಲು ಕೇಂದ್ರ ಸರ್ಕಾರ ಪೊಲೀಸ್, ಜಾರಿ ನಿರ್ದೇಶನಾಲಯ, ಕೇಂದ್ರೀಯ ತನಿಖಾದಳ, ಎನ್ಐಎ ಮತ್ತು ಎನ್ಸಿಬಿಐಗಳನ್ನ ಬಳಸಿಕೊಳ್ತಿದೆ. ಬಿಜೆಪಿಯು ರಾಜಕೀಯ ವಿರೋಧಿಗಳನ್ನ ದೇಶದ ಶತ್ರುಗಳೆಂದು ಬಿಂಬಿಸಲು ಯತ್ನಿಸುತ್ತಿದೆ ಎಂದು ಕಿಡಿಕಾರಿದ್ದಾರೆ.
ಆರ್ಎಸ್ಎಸ್, ಬಿಜೆಪಿಯೊಂದಿಗೆ ರಾಜಕೀಯವಾಗಿ ಭಿನ್ನಾಭಿಪ್ರಾಯ ಹೊಂದಿರುವವರನ್ನು ನಿಗ್ರಹಿಸಲು ಕಠಿಣ ಕ್ರಮಗಳನ್ನ ಎಣೆದಿದ್ದಾರೆ. ಇದು 2016ರ ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯದ ಯುವ ಮುಖಂಡರ ವಿರುದ್ಧ ದೇಶದ್ರೋಹ ಪ್ರಕರಣಗಳನ್ನು ದಾಖಲಿಸುವ ಮೂಲಕ ಪ್ರಾರಂಭವಾಯಿತು ಎಂದರು.
ನಿನ್ನೆಯಷ್ಟೇ ಆರ್ಎಸ್ಎಸ್ ಸಂಘಟನೆಯ ಮುಖ್ಯಸ್ಥ ಮೋಹನ್ ಭಾಗವತ್, ಸಿಎಎ ವಿರೋಧಿ ಆಂದೋಲನವನ್ನು ‘ಸಂಘಟಿತ ಗಲಭೆ’ ಎಂದಿದ್ದರು. ಬಿಜೆಪಿ ವಿರೋಧಿ ಪ್ರತಿಭಟನೆಗಳನ್ನು ದೇಶದ್ರೋಹಿ ಪಿತೂರಿಗಳೆಂಬ ಹಣೆಪಟ್ಟಿ ಕಟ್ಟಲಾಗ್ತಿದೆ. ಸಿಎಎ ಹಾಗೂ ಎನ್ಆರ್ಸಿ ವಿರುದ್ಧದ ಪ್ರತಿಭಟನೆ ವೇಳೆ ಮೋದಿ ಸರ್ಕಾರದ ಪ್ರತಿನಿಧಿಗಳು ನೀಡಿದ ಪ್ರತಿಕ್ರಿಯೆಗಳೇ ಇದಕ್ಕೆ ಉದಾಹರಣೆ ಎಂದರು.
ಈಶಾನ್ಯ ದೆಹಲಿಯಲ್ಲಿ ಹಿಂಸಾಚಾರ ಭುಗಿಲೇಳುವುದಕ್ಕೆ ಬಿಜೆಪಿಯೇ ಕಾರಣ ಎಂದು ಆರೋಪಿಸಿದ ಸೋನಿಯಾ, ಆ ಸಮಯದಲ್ಲಿ ಕೇಂದ್ರ ಸರ್ಕಾರ ಗಲಭೆ ಹತ್ತಿಕ್ಕುವ ಬದಲು, ಮೌನ ತಾಳಿತು. ಇದರಿಂದಾಗಿ ಸುಮಾರು 700ಕ್ಕೂ ಎಫ್ಐಆರ್ಗಳು ದಾಖಲಾದವು, ಪರಿಣಾಮಗಳನ್ನು ಲೆಕ್ಕಿಸದೇ ಬಿಜೆಪಿ ತನ್ನ ಸರ್ವಾಧಿಕಾರಿ ಕಾರ್ಯತಂತ್ರ ಅನುಸರಿಸುತ್ತಿದೆ ಎಂದರು.
ಹಥ್ರಾಸ್ನಲ್ಲಿ ದಲಿತ ಯುವತಿ ಮೇಲೆ ಅತ್ಯಾಚಾರವಾಗಿ, ಕೊಲೆಯಾದಾಗ ಪ್ರಶ್ನಿಸಿದ ಸಂತ್ರಸ್ತೆ ಕುಟುಂಬಕ್ಕೆ ಬೆದರಿಕೆ ಹಾಕಿದ್ದಾರೆ. ಇದು ಎನ್ಡಿಎ ಸರ್ಕಾರದ ಅಸಹಿಷ್ಣುತೆ ಮತ್ತು ಪ್ರಜಾಪ್ರಭುತ್ವ ವಿರೋಧಿ ಮನಸ್ಥಿತಿ ಎಂದು ಕಿಡಿಕಾರಿದ್ದಾರೆ. ಪ್ರಜಾಪ್ರಭುತ್ವ ವ್ಯವಸ್ಥೆ ಹಾಗೂ ಸಂವಿಧಾನವನ್ನು ಅನುಸರಿಸಿದಾಗ ಮಾತ್ರ ಈ ದೇಶ ಅಭಿವೃದ್ಧಿ ಹೊಂದುತ್ತದೆ ಎಂದು ಸೋನಿಯಾ ಗಾಂಧಿ ಅಭಿಪ್ರಾಯ ಪಟ್ಟಿದ್ದಾರೆ.