ನವದೆಹಲಿ: ಇವತ್ತಿನ ರಾಜ್ಯಸಭಾ ಕಲಾಪದಲ್ಲಿ ಕರ್ನಾಟಕದ ಸಮಸ್ಯೆ ಕುರಿತು ಹಾಗೂ ಈ ಬಗ್ಗೆ ಯಾವ ಕ್ರಮ ಕೈಗೊಳ್ಳಲಾಗಿದೆ ಎಂದು ರಾಜ್ಯಸಭಾ ಸದಸ್ಯ ಸೈಯದ್ ನಾಸೀರ್ ಹುಸೇನ್ ರಾಜ್ಯದ ಪರ ಧ್ವನಿ ಎತ್ತಿದ್ದಾರೆ.
ಕಲಾಪದ ವೇಳೆ ಸೈಯದ್ ನಾಸೀರ್ ಹುಸೇನ್, ಕಲ್ಯಾಣ ಕರ್ನಾಟಕ ಭಾಗದ ರಾಯಚೂರು ಹಾಗೂ ಯಾದಗಿರಿ ಜಿಲ್ಲೆಯ ಅಭಿವೃದ್ಧಿಗೆ ಹೆಚ್ಚಿನ ಅನುದಾನ ನೀಡಲಾಗಿದೆಯೇ ಅಥವಾ ಜಿಲ್ಲೆಗಳ ಅಭಿವೃದ್ಧಿಗೆ ಸಾಮಾಜಿಕ ಮತ್ತು ಆರ್ಥಿಕ ಸೂಚಕಗಳ ಕ್ರಮಗಳನ್ನು ಕೈಗೊಳ್ಳಲಾಗಿದೆಯೇ? ಅಲ್ಲಿನ ಸ್ಥಿತಿಗತಿಗಳು ತಿಳಿದಿರುವುದರಿಂದ ಹಾಗೂ ಆ ಭಾಗದ ಜನರ ಹಿತದೃಷ್ಟಿಯಿಂದ ಕೇಳುತ್ತಿರುವೆ ಎಂದು ನಾಸೀರ್ ಹುಸೇನ್ ಪ್ರಶ್ನಿಸಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿದ ಸಾಂಖಿಕ ಮತ್ತು ಕಾರ್ಯಕ್ರಮಗಳ ಜಾರಿ ಖಾತೆಯ ರಾಜ್ಯ ಸಚಿವ ರಾವ್ ಇಂದ್ರಜಿತ್ ಸಿಂಗ್, ಯಾದಗಿರಿ ಜಿಲ್ಲೆಯು 2009-10ರಲ್ಲಿ ಕೃಷಿ ಮತ್ತು ಜಲಸಂಪನ್ಮೂಲ ವಿಭಾಗದಲ್ಲಿ ಮೊದಲ ಡೆಲ್ಟಾ ಶ್ರೇಣಿಯಲ್ಲಿದ್ದು 3 ಕೋಟಿ ರೂ. ನೀಡಲಾಗಿತ್ತು. ಮಾರ್ಚ್ 2019ರಲ್ಲಿಯೂ ಈ ಜಿಲ್ಲೆ ಪ್ರಥಮ ಸ್ಥಾನ ಪಡೆದುಕೊಂಡಿದೆ ಎಂದರು.
ರಾಯಚೂರು ಜಿಲ್ಲೆ ಜುಲೈ 2019 ರ ಡೆಲ್ಟಾ ಶ್ರೇಣಿಯಲ್ಲಿ ಆರ್ಥಿಕ ಸೇರ್ಪಡೆ ಮತ್ತು ಕೌಶಲ್ಯಾಭಿವೃದ್ಧಿ ವಿಭಾಗದಲ್ಲಿ 4 ನೇ ಸ್ಥಾನ ಮತ್ತು ಕೃಷಿ ಮತ್ತು ಜಲ ಸಂಪನ್ಮೂಲಗಳಲ್ಲಿ 7 ನೇ ಸ್ಥಾನವನ್ನು ಪಡೆದುಕೊಂಡಿದೆ ಎಂದು ಇಂದ್ರಜಿತ್ ಸಿಂಗ್ ಲೋಕಸಭೆಗೆ ಮಾಹಿತಿ ನೀಡಿದರು.
ಈ ಎರಡೂ ಜಿಲ್ಲೆಗಳ ಸಿಎಸ್ಆರ್ನಿಂದ ಯಾದಗಿರಿ ಜಿಲ್ಲೆಯಲ್ಲಿ ಅಂದಾಜು 12.06 ಕೋಟಿ ಹಾಗೂ ರಾಯಚೂರು ಜಿಲ್ಲೆಯಲ್ಲಿ 5.01 ಕೋಟಿಯಷ್ಟು ಅನುದಾನ ಪಡೆದಿವೆ ಎಂದು ಇದೇ ಸಂದರ್ಭದಲ್ಲಿ ಇಂದ್ರಜಿತ್ ಸಿಂಗ್ ತಿಳಿಸಿದರು.
ಇನ್ನೋರ್ವ ರಾಜ್ಯಸಭಾ ಸದಸ್ಯ ಬಿ.ಕೆ.ಹರಿಪ್ರಸಾದ್ ಮಾತನಾಡಿ, ರಾಯಚೂರು ಮತ್ತು ಯಾದಗಿರಿ ಜಿಲ್ಲೆ ತೀವ್ರ ಉಷ್ಣ ಪ್ರದೇಶಗಳಾಗಿದ್ದು, ಅತ್ಯಂತ ಹಿಂದುಳಿದಿರುವ ಜಿಲ್ಲೆಗಳಾಗಿವೆ. ಈ ಭಾಗದಲ್ಲಿನ ಶೈಕ್ಷಣಿಕ ಅಭಿವೃದ್ಧಿಗೆ ಯಾವ ಕ್ರಮ ಕೈಗೊಳ್ಳಲಾಗಿದೆ ಎಂದು ಪ್ರಶ್ನೆ ಮಾಡಿದ್ದಾರೆ.
ಇದಕ್ಕೆ ಉತ್ತರಿಸಿದ ಸಚಿವರು, ಶಿಕ್ಷಣ ಎಂಬುದು ಮೂಲ ಅವಶ್ಯಕತೆಗಳಲ್ಲಿ ಒಂದಾಗಿದೆ. ಶೈಕ್ಷಣಿಕ ಕ್ಷೇತ್ರದಲ್ಲಿ ಯಾವ ಜಿಲ್ಲೆ ಉನ್ನತ ಸ್ಥಾನದಲ್ಲಿದೆ ಹಾಗೂ ಯಾವ ಜಿಲ್ಲೆ ಕೆಳಹಂತದಲ್ಲಿದೆ ಎಂಬ ವರದಿ ಈಗಾಗಲೇ ಎಲ್ಲರಿಗೂ ಲಭ್ಯವಿದೆ ಎಂದರು. ಈಗಾಗಲೇ ಶೈಕ್ಷಣಿಕ ಕ್ಷೇತ್ರದಲ್ಲಿ ಹಿಂದುಳಿದ ಜಿಲ್ಲೆಗಳ ಪಟ್ಟಿ ಮಾಡಿದ್ದು, ಉನ್ನತೀಕರಣಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದರು.