ನವದೆಹಲಿ: ನಿರ್ಭಯಾ ಸಾಮೂಹಿಕ ಅತ್ಯಾಚಾರ ಹಾಗೂ ಕೊಲೆ ಪ್ರಕರಣದ ಅಪರಾಧಿಗಳ ವಿರುದ್ಧ ದೆಹಲಿ ಕೋರ್ಟ್ ಹೊಸದಾಗಿ ಡೆತ್ ವಾರೆಂಟ್ ನೀಡಿದ್ದು, ಫೆ.01 ರ ಬೆಳಗ್ಗೆ 6 ಗಂಟೆಗೆ ಅಪರಾಧಿಗಳನ್ನು ಗಲ್ಲಿಗೇರಿಸುವುದು ಖಚಿತವಾಗಿದೆ.
ಈ ಮೊದಲು ದೆಹಲಿ ನ್ಯಾಯಾಲಯವು ನಿರ್ಭಯಾ ಅತ್ಯಾಚಾರಿ ಪ್ರಕರಣದ ನಾಲ್ವರು ಅಪರಾಧಿಗಳಾದ ಮುಖೇಶ್(32), ಪವನ್ ಗುಪ್ತಾ(25 ), ವಿನಯ್ ಶರ್ಮಾ (26) ಮತ್ತು ಅಕ್ಷಯ್ ಕುಮಾರ್ ಸಿಂಗ್(31) ಅವರಿಗೆ ಜನವರಿ 22ರಂದು ಬೆಳಿಗ್ಗೆ 7 ಗಂಟೆಗೆ ತಿಹಾರ್ ಜೈಲಿನಲ್ಲಿ ಗಲ್ಲಿಗೇರಿಸುವಂತೆ ಆದೇಶ ನೀಡಿತ್ತು. ಆದರೆ ಪ್ರಕರಣದ ಅಪರಾಧಿಗಳಲ್ಲಿ ಒಬ್ಬನಾದ ಮುಖೇಶ್ ಸಿಂಗ್ ಕ್ಷಮಾದಾನ ಅರ್ಜಿಯನ್ನು ದೆಹಲಿ ಸರ್ಕಾರಕ್ಕೆ ಸಲ್ಲಿಸಿದ್ದನು. ಅರ್ಜಿಯನ್ನು ದೆಹಲಿ ಸರ್ಕಾರ ತಿರಸ್ಕರಿಸಿ ಕೇಂದ್ರ ಗೃಹ ಇಲಾಖೆಗೆ ಕಳುಹಿಸಿತ್ತು. ಬಳಿಕ ಕೇಂದ್ರ ಗೃಹ ಇಲಾಖೆ ಇದನ್ನು ರಾಷ್ಟ್ರಪತಿಗೆ ಕಳುಹಿಸಿದ್ದು, ಇಂದು ರಾಷ್ಟ್ರಪತಿ ರಾಮ್‌ನಾಥ್ ಕೋವಿಂದ್ ಅರ್ಜಿಯನ್ನು ತಿರಸ್ಕರಿಸಿದೆ. ಹೀಗಾಗಿ ಇದೀಗ ದೆಹಲಿ ಕೋರ್ಟ್ ಗಲ್ಲು ಶಿಕ್ಷೆ ಜಾರಿಗೆ ಹೊಸ ದಿನಾಂಕ ನಿಗದಿ ಮಾಡಿದೆ.
ಕೋರ್ಟ್ ನಡೆಗೆ ನಿರ್ಭಯಾ ತಾಯಿ ಬೇಸರ:
ಪ್ರಕರಣದ ಅಪರಾಧಿಗಳಿಗೆ ಗಲ್ಲು ಶಿಕ್ಷೆ ಮುಂದೂಡಿರುವುದಕ್ಕೆ ನಿರ್ಭಯಾ ತಾಯಿ ಆಶಾ ದೇವಿ ದೆಹಲಿ ಸರ್ಕಾರ ಹಾಗೂ ಕೋರ್ಟ್ ವಿರುದ್ಧ ಬೇಸರ ವ್ಯಕ್ತಪಡಿಸಿದ್ದಾರೆ. ನಮ್ಮ ವ್ಯವಸ್ಥೆ ಅಪರಾಧವನ್ನು ಕೇಳುತ್ತಿಲ್ಲ, ಅಪರಾಧಿಗಳು ಬಯಸಿದನ್ನು ಕೇಳುತ್ತಿದೆ. ನಮ್ಮ ಮಗಳನ್ನು ಕಳೆದುಕೊಂಉಏಳು ವರುಷಗಳಾಗಿವೆ. ಅಂದಿನಿಂದ ಇಂದಿನ ವರೆಗೂ ನ್ಯಾಯಕ್ಕಾಗಿ ಕಾಯುತ್ತಾ, ಹೋರಾಟ ಮಾಡುತ್ತಾ ಬಂದಿದ್ದೇವೆ. ಆದರೆ ಅಪರಾಧಿಗಳಿಗೆ ಶಿಕ್ಷೆಯ ದಿನಾಂಕ ಮುಂದೂಡಿಕೆಯಾಗುತ್ತಲೇ ಇದೆ. ಫೆ.1 ಕ್ಕೆ ಕೂಡ ಗಲ್ಲು ಶಿಕ್ಷೆ ಆಗುತ್ತದೆ ಎಂಬುದರ ಮೇಲೆ ನಂಬಿಕೆಯಿಲ್ಲ, ಅದು ಕೂಡ ಮುಂದೂಡಿಕೆಯಾಗಬಹುದು ಎಂದು ಮಾಧ್ಯಮಗಳ ಬಳಿ ಹೇಳಿದ್ದಾರೆ.