ವಿಶಾಖಪಟ್ಟಣಂ (ಆಂಧ್ರ ಪ್ರದೇಶ): ದೇಶಾದ್ಯಂತ ತಮ್ಮ ತಮ್ಮ ಮನೆಗಳನ್ನು ತಲುಪಲು ವಲಸಿಗರು ತೀವ್ರ ಸಂಕಷ್ಟ ಎದುರಿಸುತ್ತಿರುವ ಈ ಸಂದರ್ಭದಲ್ಲಿ ವಯಸ್ಸಾದ ವಿಶೇಷ ಚೇತನ ವ್ಯಕ್ತಿಯೊಬ್ಬರು ಇಲ್ಲಿಂದ ತನ್ನ ತವರು ರಾಜ್ಯ ಉತ್ತರ ಪ್ರದೇಶಕ್ಕೆ ಕೈ ಚಾಲಿತ ಟ್ರೈಸಿಕಲ್‌ನಲ್ಲಿಯೇ ಕಠಿಣ ಪ್ರಯಾಣ ಕೈಗೊಂಡಿದ್ದಾರೆ.
ರಾಮ್ ಸಿಂಗ್ ಎಂಬುವರು ಎರಡು ತಿಂಗಳ ಹಿಂದೆ ಆಂಧ್ರ ಪ್ರದೇಶದ ರಾಜಮಂಡ್ರಿಗೆ ಬಂದು ಸುಗಂಧ ದ್ರವ್ಯ ಮಾರಾಟ ಮಾಡುತ್ತಿದ್ದರು. ಈ ನಡುವೆ ಲಾಕ್ಡೌನ್ ಪ್ರಾರಂಭವಾದ ನಂತರ ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡಲು ಸಾಧ್ಯವಾಗದೆ ಹಾಗೂ ಯಾವುದೇ ಆದಾಯವಿಲ್ಲದೆ ಇಲ್ಲಿಯೇ ಸಿಲುಕಿದ್ದರು.
ಯಾವಾಗ ಇವರ ಸಹಚರರು ಕಾಲ್ನಡಿಗೆಯಲ್ಲಿ ತಮ್ಮ ರಾಜ್ಯಗಳಿಗೆ ತೆರಳಿದರೋ ಆಗ ಸಿಂಗ್ ಕೂಡಾ ಉತ್ತರ ಪ್ರದೇಶದ ಝಾನ್ಸಿಯಲ್ಲಿರುವ 1,000 ಕಿಲೋ ಮೀಟರ್ ದೂರದ ತಮ್ಮ ಹಳ್ಳಿಗೆ ಕೈ ಚಾಲಿತ ಟ್ರೈಸಿಕಲ್‌ನ ಮೂಲಕವೇ ಪ್ರಯಾಣ ಮಾಡಲು ನಿರ್ಧರಿಸಿದರು.
ಮೂರು ದಿನಗಳ ಹಿಂದೆ ರಾಜಮಂಡ್ರಿಯಿಂದ ಹೊರಟಿದ್ದ ಸಿಂಗ್, ವಿಶಾಖಪಟ್ಟಣಂ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿ 16ರಲ್ಲಿ ಪತ್ತೆಯಾಗಿದ್ದರು. ಈ ಸಂದರ್ಭದಲ್ಲಿ ಹೋಮಿಯೋಪತಿ ವೈದ್ಯ ಡಾ. ಶಶೀಧರ್, ಅವರೊಂದಿಗೆ ಮಾತನಾಡಿ ಉಳಿದ ಪ್ರಯಾಣಕ್ಕಾಗಿ ಹಣ ನೀಡಿದ್ದಾರೆ.
ಪ್ರತಿದಿನ ಮುಂಜಾನೆ 3 ಗಂಟೆಗೆ ಎದ್ದು, ವಿಶ್ರಾಂತಿ ಪಡೆಯದೇ ದಿನಕ್ಕೆ ಕನಿಷ್ಠ 40-50 ಕಿಲೋ ಮೀಟರ್ ದೂರ ಕ್ರಮಿಸಲು ಪ್ರಯತ್ನಿಸುತ್ತೇನೆ. ನನಗೀಗ ಯಾವುದೇ ಆದಾಯದ ಮೂಲವಿಲ್ಲ. ಹೀಗಾಗಿ ತನ್ನ ಕುಟುಂಬ ವಾಸಿಸುತ್ತಿರುವ ಹಳ್ಳಿಗೆ ಮರಳದೆ ಬೇರೆ ದಾರಿಯಿಲ್ಲ ಎಂದು ವೃದ್ಧ ತನ್ನ ಅಳಲು ತೋಡಿಕೊಂಡಿದ್ದಾನೆ.