ನವದೆಹಲಿ: ಕೋವಿಡ್ ಲಾಕ್ಡೌನ್ ವೇಳೆದಲ್ಲಿ ದೀಪ ಬೆಳಗಿದ್ದಕ್ಕೆ ಹಾಗೂ ಜಾಗಟೆ ಬಾರಿಸಿದ್ದಕ್ಕೆ ಕೇಳಿಬಂದ ಟೀಕೆಗಳಿಗೆ ಬಿಜೆಪಿ ಸಂಸದ ಸುಧಾಂಶು ತ್ರಿವೇದಿ ರಾಜ್ಯಸಭೆಯಲ್ಲಿ ಇಂದು ಪ್ರತಿಕ್ರಿಯೆ ನೀಡಿದ್ದಾರೆ.
ನಮ್ಮ ಅನೇಕ ಸ್ನೇಹಿತರಿಗೆ ದೀಪಗಳನ್ನು ಬೆಳಗುವುದರಲ್ಲಿ ಮತ್ತು ಜಾಗಟೆ, ಪಾತ್ರೆಗಳನ್ನು ಬಾರಿಸುವುದರಲ್ಲಿ ಸಮಸ್ಯೆ ಇದೆ. ಇವರಿಗೆ ಇತಿಹಾಸ ಸರಿಯಾಗಿ ತಿಳಿದಿಲ್ಲ. ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಚರಕದಲ್ಲಿ ಬಟ್ಟೆ ನೇಯ್ದಿದ್ದರಿಂದ ಬ್ರಿಟಿಷರು ಭಾರತ ಬಿಟ್ಟು ತೊಲಗಿದರಾ? ಇದು ಗಾಂಧೀಜಿಯವರು ಆಯ್ಕೆ ಮಾಡಿದ ಸಂಕೇತವಾಗಿತ್ತು ಎಂದು ಟೀಕಾಕಾರರಿಗೆ ತ್ರಿವೇದಿ ತಿರುಗೇಟು ನೀಡಿದ್ದಾರೆ.
ರಾಹುಲ್ ಗಾಂಧಿಯ ಹೆಸರು ಹೇಳದೆ ಪರೋಕ್ಷವಾಗಿ ಟಾಂಗ್ ನೀಡಿರುವ ತ್ರಿವೇದಿ, ಫೆಬ್ರವರಿ ಆರಂಭದಲ್ಲಿ ಕೊರೊನಾ ಸೋಂಕಿನ ತೀವ್ರತೆ ಬಗ್ಗೆ 'ಯುವ ನಾಯಕ' ಟ್ವೀಟ್ ಮಾಡಿದ್ದರು. 'ನಮಸ್ತೆ ಟ್ರಂಪ್' ಕಾರ್ಯಕ್ರಮ ಹಾಗೂ ವಿಮಾನ ಹಾರಾಟವನ್ನು ಆರಂಭದಲ್ಲೇ ಸ್ಥಗಿತಗೊಳಿಸದ ಕಾರಣಕ್ಕಾಗಿ ಕೇಂದ್ರವನ್ನು ಟೀಕಿಸಿದ್ದರು. ಆದರೆ ವಿದೇಶಿ ನೆಲದಲ್ಲಿ ಕುಳಿತುಕೊಂಡೇ ಹೀಗೆ ಟ್ವೀಟ್ ಮಾಡಿದ್ದರು. ಸಂಸತ್ತಿನಲ್ಲಿ ಈ ಬಗ್ಗೆ ಯಾವುದೇ ಚರ್ಚೆಯನ್ನು ಅವರು ಪ್ರಾರಂಭಿಸಿಲ್ಲ ಎಂದು ಹೇಳಿದರು.