ಹೈದರಾಬಾದ್: ಲಡಾಖ್ ಗಡಿಯಲ್ಲಿ ಶಾಂತಿ ಮರುಸ್ಥಾಪನೆ ಸಮಯದಲ್ಲೇ ಭಾರತ ಹಾಗೂ ಚೀನಾ ಸೈನಿಕರ ಮಧ್ಯೆ ಘರ್ಷಣೆ ನಡೆದು ಭಾರತದ 20 ಹಾಗೂ ಚೀನಾದ 43 ಜನ ಸೈನಿಕರು ಪ್ರಾಣ ಕಳೆದುಕೊಂಡಿದ್ದಾರೆ.
ವಾಸ್ತವ ನಿಯಂತ್ರಣ ರೇಖೆಯ ಬಳಿ ಎರಡೂ ಕಡೆಯ ಸೈನಿಕರ ಸಾವು, ನೋವು ಸಂಭವಿಸಿರುವುದು 1975 ರ ನಂತರ ಇದೇ ಪ್ರಥಮ ಬಾರಿಯಾಗಿದೆ. ಈ ಕುರಿತು ನಿವೃತ್ತ ಲೆಫ್ಟಿನೆಂಟ್ ಜನರಲ್ ಡಿಎಸ್ ಹೂಡಾ ಈಟಿವಿ ಭಾರತ್ನೊಂದಿಗೆ ಮಾತನಾಡಿದ್ದು, ಇಂಥ ಸಂಘರ್ಷಗಳ ದೂರಗಾಮಿ ಪರಿಣಾಮಗಳು ಹಾಗೂ ಶಾಂತಿ ಸ್ಥಾಪನೆಯ ಮಾರ್ಗಗಳ ಕುರಿತಂತೆ ವಿಚಾರಗಳನ್ನು ಹಂಚಿಕೊಂಡಿದ್ದಾರೆ.
ನಿವೃತ್ತ ಲೆಫ್ಟಿನೆಂಟ್ ಜನರಲ್ ಹೂಡಾ ಅವರೊಂದಿಗೆ ಬಿಲಾಲ್ ಭಟ್ ನಡೆಸಿದ ಸಂದರ್ಶನದ ಪೂರ್ಣ ಮಾಹಿತಿ ಇಲ್ಲಿದೆ:
- ಲಡಾಖ್ ಬಳಿಯ ಗಾಲ್ವನ್ ವ್ಯಾಲಿಯಲ್ಲಿ ಶಾಂತಿ ಮರುಸ್ಥಾಪನೆಯ ವೇಳೆ ಘರ್ಷಣೆ ಸಂಭವಿಸಿ ಭಾರತೀಯ ಯೋಧರು ಸಾವನ್ನಪ್ಪಿದ್ದಾರೆ. ಇದರ ಬಗ್ಗೆ ತಮ್ಮ ಅನಿಸಿಕೆ ಏನು?
ಈ ಪ್ರಶ್ನೆಗೆ ಉತ್ತರಿಸಿದ ನಿವೃತ್ತ ಲೆಫ್ಟಿನೆಂಟ್ ಜನರಲ್ ಡಿಎಸ್ ಹೂಡಾ, ಶಾಂತಿ ಮರುಸ್ಥಾಪನೆಯಾಗಲಿದೆ ಎಂದು ಈ ಮುನ್ನ ಹೇಳಲಾಗಿತ್ತು. ಆದರೆ ಗಡಿಯಲ್ಲಿನ ವಾತಾವರಣ ತೀರಾ ಗಂಭೀರವಾಗಿದೆ. 1975 ರ ನಂತರ ಮೊದಲ ಬಾರಿಗೆ ಸೈನಿಕರ ಸಾವು ಸಂಭವಿಸಿದೆ. ಈ ಸ್ಥಿತಿಯನ್ನು ಪರಿಹರಿಸುವುದು ಹೇಗೆಂದು ಚಿಂತಿಸಬೇಕಿದೆ. ಲಡಾಖ್ನಲ್ಲಿನ ಪರಿಸ್ಥಿತಿ ತೀರಾ ಗಂಭೀರವಾಗಿದೆ ಎನಿಸುತ್ತದೆ.
- ಈಗ ಪರಿಸ್ಥಿತಿ ತೀರಾ ಕ್ಲಿಷ್ಟಕರವಾಗಿದೆ ಎನ್ನುವುದು ಏಕೆ?. ಮೊದಲು ಹಾಗಿರಲಿಲ್ಲವೇ?. ಗುಂಡು ಹಾರಿಲ್ಲವೆಂದು ಹಾಗೆ ಹೇಳಬಹುದಾ?
ಗುಂಡು ಹಾರಿವೆ ಅಥವಾ ಇಲ್ಲ ಎಂಬುದು ವಿಷಯವಲ್ಲ. ಆದರೆ ಎರಡೂ ಕಡೆಯಿಂದ ಹಿಂಸಾತ್ಮಕ ಘಟನೆಗಳು ಈ ಹಿಂದೆ ನಡೆದಿರಲಿಲ್ಲ. ಪ್ರತಿವರ್ಷವೂ ನೂರಾರು ಘರ್ಷಣೆಗಳು ನಡೆಯುತ್ತಿರುತ್ತವೆ. ಎರಡೂ ಕಡೆಯಿಂದ ಒಪ್ಪಿತವಾದ ಶಿಷ್ಟಾಚಾರಗಳು ಜಾರಿಯಲ್ಲಿದ್ದವು. ಒಂದು ವೇಳೆ ಗಡಿ ಉಲ್ಲಂಘನೆಯಾದಲ್ಲಿ ನಮ್ಮ ಸೈನಿಕರು ಸುಮ್ಮನಿರುವುದಾದರೂ ಹೇಗೆ?. ಗುಂಡು ಹಾರಿಲ್ಲವಾದರೂ ಶಿಷ್ಟಾಚಾರ ಮಾತ್ರ ಸ್ಪಷ್ಟವಾಗಿ ಉಲ್ಲಂಘನೆಯಾಗುತ್ತಿವೆ. ಇದೊಂದು ಗಂಭೀರ ವಿಷಯ. ಗುಂಡು ಹಾರಿಸಿಲ್ಲವಾದದ್ದರಿಂದ ಎಲ್ಲವೂ ಸರಿಯಾಗಿದೆ ಎನ್ನುವುದು ಸರಿಯಲ್ಲ. ಗಡಿಯಲ್ಲಿ ಶಾಂತಿ ಇಲ್ಲದಿರುವುದರಿಂದಲೇ ಪರಿಸ್ಥಿತಿ ಸಂಕೀರ್ಣವಾಗಿದೆ ಎಂದು ನಿವೃತ್ತ ಲೆಫ್ಟಿನೆಂಟ್ ಜನರಲ್ ಡಿಎಸ್ ಹೂಡಾ ಹೇಳಿದರು.
- ಇದೇ ಸ್ಥಳದಲ್ಲಿ ಅವರು ಸಂಘರ್ಷವನ್ನು ಏಕೆ ಆರಂಭಿಸಿದರು?. ಇಲ್ಲಿ ಅವರಿಗೆ ಅನುಕೂಲಕರವಾದ ಅಂಶಗಳೇನಾದರೂ ಇವೆಯಾ?
ಇದರಲ್ಲಿ ಎರಡು ವಿಷಯಗಳು ಅಡಕವಾಗಿವೆ. ಪ್ಯಾಂಗೊಂಗ್ ಕೆರೆಯ ಉತ್ತರ ತೀರದಲ್ಲಿ ನಾವು ಈಗಾಗಲೇ ವಾಸ್ತವ ನಿಯಂತ್ರಣ ರೇಖೆಯ (ಎಲ್ಎಸಿ) ನಿಯಂತ್ರಣದಲ್ಲಿದ್ದೇವೆ. ಆದರೆ ಎಲ್ಎಸಿ ಪಶ್ಚಿಮದಲ್ಲಿದೆ ಎಂದು ಅವರು ಹೇಳುತ್ತಾರೆ. ನಾವು ಪೂರ್ವದಲ್ಲಿದೆ ಎನ್ನುತ್ತೇವೆ. ಫಿಂಗರ್ 4 ಹಾಗೂ ಫಿಂಗರ್ 8 ಎಂದು ಕರೆಯಲಾಗುವ ಎರಡು ಭೌಗೋಳಿಕ ಪ್ರದೇಶಗಳು ಇಲ್ಲಿವೆ. ಫಿಂಗರ್ 4 ಸ್ಥಳವನ್ನು ಚೀನಾ ಎಲ್ಎಸಿ ಎಂದು ಪರಿಗಣಿಸಿದರೆ ನಾವು ಫಿಂಗರ್ 8 ಪ್ರದೇಶವನ್ನು ಎಲ್ಎಸಿ ಎಂದು ಪರಿಗಣಿಸುತ್ತೇವೆ. ಇಲ್ಲಿ ಚೀನಿಯರು ಅತಿಕ್ರಮಣ ಮಾಡಿದ್ದಾರೆ. ಇನ್ನು ಇತ್ತೀಚೆಗೆ ಸಂಘರ್ಷ ಸಂಭವಿಸಿದ ಇನ್ನೊಂದು ಪ್ರದೇಶವೆಂದರೆ ಗಾಲ್ವನ್ ವ್ಯಾಲಿ ಎಂದು ಅವರು ಹೇಳಿದರು.
ಗಾಲ್ವನ್ ನದಿಯು ಟಿಬೆಟ್ ಕಡೆಯಿಂದ ಬಂದು ಶಿಯೋಕ್ ನದಿಗೆ ಸೇರುತ್ತದೆ. ಎಲ್ಎಸಿಯಿಂದ ಶಿಯೋಕ್ ನದಿ 8 ಕಿಮೀ ದೂರದಲ್ಲಿದೆ. ಶಿಯೋಕ್ ನದಿಯ ಬಳಿ ಹಾದು ಹೋಗುವ ಪ್ರಮುಖ ರಸ್ತೆಯನ್ನು ಡರ್ಬೋಕ್-ಶಿಯೋಕ್-ಡಿಬಿಓ ರೋಡ್ ಎಂದು ಕರೆಯಲಾಗುತ್ತದೆ. ಉತ್ತರ ಲಡಾಖ್ ಸಂಪರ್ಕಕ್ಕೆ ಈ ದಾರಿ ಪ್ರಮುಖವಾಗಿದೆ. ಒಂದು ವೇಳೆ ಚೀನಾ ಸೈನಿಕರು ಒಳಬಂದಲ್ಲಿ ಅವರು ಈ ರಸ್ತೆಯನ್ನು ಬಂದ್ ಮಾಡಿಬಿಡಬಲ್ಲರು. ಹೀಗಾಗಿ ಪ್ರಮುಖ ರಸ್ತೆಯನ್ನು ರಕ್ಷಿಸಿಕೊಳ್ಳುವ ನಿಟ್ಟಿನಲ್ಲಿ ಗಾಲ್ವನ್ ವ್ಯಾಲಿ ಪ್ರಾಮುಖ್ಯತೆ ಪಡೆದಿದೆ ಎಂದರು.
- ರಸ್ತೆಯನ್ನು ಆಕ್ರಮಿಸಲು ಅವರು ಇದನ್ನೆಲ್ಲ ಮಾಡುತ್ತಿದ್ದಾರೆಯೇ?. ರಸ್ತೆ ಆಕ್ರಮಿಸುವುದು ಅವರಿಗೆ ಸುಲಭವೇ?
ಇಲ್ಲ, ಅವರಿಗೆ ಇದು ಅಷ್ಟೊಂದು ಸುಲಭವಲ್ಲ. ರಸ್ತೆ ನಮ್ಮ ನಿಯಂತ್ರಣದಲ್ಲಿರುವವರೆಗೂ ನಾವು ನಮ್ಮ ಸೈನಿಕರನ್ನು ಅಲ್ಲಿಗೆ ಕಳುಹಿಸಬಹುದು ಹಾಗೂ ನಿಯಂತ್ರಣ ಸಾಧಿಸುತ್ತಿರಬಹುದು. ಆದರೆ ಅವರು ಒಂದೊಮ್ಮೆ ಒಳಬಂದರೆ ನಮಗೆ ಅಪಾಯ ಎದುರಾಗಲಿದೆ ಎಂದು ನಿವೃತ್ತ ಲೆಫ್ಟಿನೆಂಟ್ ಜನರಲ್ ಡಿಎಸ್ ಹೂಡಾ ಹೇಳಿದರು.
- ಮುಂದಿನ ದಾರಿ ಏನು?. ಪರಿಸ್ಥಿತಿ ಎಲ್ಲಿಗೆ ತಲುಪಬಹುದು?
ಇದಕ್ಕೆ ಮಿಲಿಟರಿ ಬಲ ಉತ್ತರವಾಗಲಾರದು ಎಂಬುದು ನನ್ನ ಭಾವನೆ. ರಾಜತಾಂತ್ರಿಕ ಹಾಗೂ ರಾಜಕೀಯ ಮಟ್ಟದಲ್ಲೇ ವಿವಾದವನ್ನು ಬಗೆಹರಿಸಿಕೊಳ್ಳಬೇಕು. ಮಾತುಕತೆಯಿಂದಲೇ ಎರಡೂ ರಾಷ್ಟ್ರಗಳ ಮಧ್ಯೆ ಶಾಂತಿ ಸ್ಥಾಪನೆ ಸಾಧ್ಯ ಎಂದು ತಿಳಿಸಿದರು.