ನವದೆಹಲಿ: ಕೊರೊನಾ ವೈರಸ್ (ಎನ್‌ಸಿಒವಿ) ಯಿಂದ ಬಳಲುತ್ತಿರುವವರಿಗೆ ಚಿಕಿತ್ಸೆ ನೀಡುವ ಸಲುವಾಗಿ ಎಚ್‌ಐವಿ ಸೋಂಕನ್ನು ನಿಯಂತ್ರಿಸಲು ವ್ಯಾಪಕವಾಗಿ ಬಳಸಲಾಗುವ ಔಷಧವನ್ನು ನಿರ್ಬಂಧಿತವಾಗಿ ಬಳಸುವಂತೆ ಡ್ರಗ್ ಕಂಟ್ರೋಲರ್ ಜನರಲ್ (ಡಿಜಿಸಿಐ) ಅನುಮೋದಿಸಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಮೂಲಗಳ ಪ್ರಕಾರ, ದೇಶದ ಅತ್ಯುನ್ನತ ಆರೋಗ್ಯ ಸಂಶೋಧನಾ ಸಂಸ್ಥೆಯಾದ ಭಾರತೀಯ ಮೆಡಿಕಲ್ ರಿಸರ್ಚ್, ಎಚ್‌ಐವಿ ಪೀಡಿತರಿಗೆ ನೀಡುವ ಔಷಧ ಸಂಯೋಜನೆಯಾದ ಲೋಪಿನಾವಿರ್ ಮತ್ತು ರಿಟೋನವಿರ್ ಅನ್ನು ನಿಯಂತ್ರಿತವಾಗಿ ಬಳಸಲು ಅನುಮತಿ ಕೇಳಿದೆ ಎಂಬ ಮಾಹಿತಿ ಇದೆ.
ನಮ್ಮ ಅಧ್ಯಯನದ ಪ್ರಕಾರ, ಈ ಔಷಧ ಕೊರೊನಾ ವೈರಸ್ ಸೋಂಕು ತಡೆಗಟ್ಟುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ ಎಂದು ಐಸಿಎಂಆರ್ ಅಧಿಕಾರಿ ತಿಳಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿಯವರ ನಿರ್ದೇಶನದ ಮೇರೆಗೆ ದೇಶದಲ್ಲಿ ಮಾರಣಾಂತಿಕ ಎನ್‌ಸಿಒವಿ ಸೋಂಕನ್ನು ಪರಿಶೀಲಿಸಲು, ಮೇಲ್ವಿಚಾರಣೆ ಮತ್ತು ಮೌಲ್ಯಮಾಪನ ಮಾಡಲು ಸಚಿವರ ತಂಡವನ್ನು ರಚಿಸಲಾಗಿದೆ. ಕೇಂದ್ರ ಮಟ್ಟದಲ್ಲಿ ಸಂಬಂಧಪಟ್ಟ ಸಚಿವಾಲಯಗಳೊಂದಿಗೆ ನಿಕಟ ಸಮನ್ವಯ ನಡೆಸಿ, ವಿವಿಧ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಆರೋಗ್ಯ ಸಚಿವಾಲಯ ಹೇಳಿದೆ.
ಈಗಾಗಲೇ ಕೊರೊನಾ ವೈರಸ್‌ಗೆ ಚೀನಾದಲ್ಲಿ ಸಾವನ್ನಪ್ಪಿದವರ ಸಂಖ್ಯೆ 490 ಕ್ಕೆ ಏರಿದೆ. ಮಾರಕ ಕಾಯಿಲೆಯಿಂದ ಬಳಲುತ್ತಿರುವವರ ಸಂಖ್ಯೆ 24,000 ದಾಟಿದೆ. ಇಲ್ಲಿಯ ವರೆಗೆ ಕೊರೊನಾ ವೈರಸ್ ಥೈಲ್ಯಾಂಡ್, ಸಿಂಗಾಪುರ್, ಜಪಾನ್, ದಕ್ಷಿಣ ಕೊರಿಯಾ, ಆಸ್ಟ್ರೇಲಿಯಾ, ಮಲೇಷ್ಯಾ, ತೈವಾನ್, ವಿಯೆಟ್ನಾಂ, ಫಿಲಿಪ್ಪೀನ್ಸ್, ನೇಪಾಳ, ಶ್ರೀಲಂಕಾ, ಕಾಂಬೋಡಿಯಾ, ಅಮೆರಿಕಾ, ಕೆನಡಾ, ಜರ್ಮನಿ, ಫ್ರಾನ್ಸ್, ಬ್ರಿಟನ್, ಇಟಲಿ, ರಷ್ಯಾ , ಫಿನ್ಲ್ಯಾಂಡ್, ಸ್ಪೇನ್ ಮತ್ತು ಸ್ವೀಡನ್ನಲ್ಲಿ ಸಹ ಕಂಡುಬಂದಿದೆ.