ಮಹಾರಾಷ್ಟ್ರ/ಹಿಂಗೋಲಿ: ಎರಡು ಪ್ರತ್ಯೇಕ ಘಟನೆಗಳಲ್ಲಿ ಕೋವಿಡ್-19 ಹರಡುವ ಭೀತಿಯಿಂದ, ಕ್ವಾರಂಟೈನ್ ಆಗಿ ಹೊರಬಂದವರ ಮೇಲೆ ಜನ ಹಲ್ಲೆ ನಡೆಸಿ, ಅಮಾನವೀಯವಾಗಿ ವರ್ತಿಸಿದ್ದಾರೆ.
ವಸ್ಮತ್ ತಾಲೂಕಿನ ಹಟ್ಟಾ ಗ್ರಾಮದ ಕುಟುಂಬವೊಂದು ಮೇ ಮೊದಲ ವಾರ ಮುಂಬೈನಿಂದ ಮರಳಿದ್ದರು. ವೈದ್ಯರ ಸೂಚನೆ ಮೇರೆಗೆ ಮನೆಗೆ ಬರದೇ ಹಳ್ಳಿಯಿಂದ ಸ್ವಲ್ಪ ದೂರದಲ್ಲಿರುವ ತಮ್ಮ ಜಮೀನಿನಲ್ಲಿ ಕ್ವಾರಂಟೈನ್ ಆಗಿದ್ದರು.
ಮೇ 27 ರಂದು ಅವರ 14 ದಿನಗಳ ಕ್ವಾರಂಟೈನ್ ಅವಧಿ ಮುಗಿದ ಕಾರಣ ಈ ಕುಟುಂಬದ ಇಬ್ಬರು ಹೊರಬಂದು ತಮ್ಮ ಹೊಲಕ್ಕೆ ಹೋಗುವ ರಸ್ತೆಯ ಪಕ್ಕದಲ್ಲಿ ಕುಳಿತಿದ್ದರು. ಆ ವೇಳೆ ಅಲ್ಲಿಗೆ ಬಂದ ಇಬ್ಬರು ಗ್ರಾಮಸ್ಥರು ಅವರ ಜೊತೆ ಗಲಾಟೆ ಮಾಡಿ ಜಮೀನಿಗೆ ಹಿಂತಿರುಗುವಂತೆ ಆಗ್ರಹಿಸಿದರು. ನಂತರ ಅನೇಕ ಗ್ರಾಮಸ್ಥರು ಅವರ ಜೊತೆ ವಾಗ್ವಾದಕ್ಕಿಳಿದು ಗರ್ಭಿಣಿಯೆಂದೂ ನೋಡದೇ ಮನಬಂದಂತೆ ಥಳಿಸಿದ್ದಾರೆ. ಘಟನೆ ಸಂಬಂಧ ಗ್ರಾಮಸ್ಥರ ವಿರುದ್ಧ ನೊಂದ ಕುಟುಂಬ ಹಾಗೂ ಕುಟುಂಬದ ವಿರುದ್ಧ ಗ್ರಾಮಸ್ಥರು ಎರಡೂ ಕಡೆಯವರು ದೂರು ದಾಖಲಿಸಿದ್ದಾರೆ.
ಬಾವಿಯಲ್ಲಿ ನೀರು ತರಲು ಹೋದ ವ್ಯಕ್ತಿಗೆ ಥಳಿತ:
ಇದೇ ರೀತಿಯ ಮತ್ತೊಂದು ಘಟನೆಯಲ್ಲಿ ಮಾಲ್ಹಿವಾರ ಗ್ರಾಮದಲ್ಲಿ ಬಾವಿ ನೀರು ತರಲು ಹೋಗಿದ್ದ ವ್ಯಕ್ತಿಯೊಬ್ಬನಿಗೆ ಥಳಿಸಲಾಗಿದೆ.
ಮೂಲಗಳ ಪ್ರಕಾರ ಮುರುಳೀಧರ್ ಬೋಕರೆ ಎಂಬಾತ ಪತ್ನಿ, ಮಗಳ ಸಮೇತ ಔರಂಗಾಬಾದ್ನಿಂದ ಹಿಂತಿರುಗಿದ್ದು, ವೈದ್ಯರ ಸೂಚನೆಯಂತೆ ತಮ್ಮ ಗ್ರಾಮಕ್ಕೆ ತೆರಳದೇ ಊರ ಹೊರಗೆ ಕ್ವಾರಂಟೈನ್ ಆಗಿದ್ದರು. 14 ದಿನಗಳ ಕ್ವಾರಂಟೈನ್ ಮುಗಿಯುತ್ತಿದ್ದಂತೆ ಭೋಕರೆಯು ಸರ್ಪಂಚ್ ಮತ್ತು ಪೊಲೀಸರಿಗೆ ಮಾಹಿತಿ ನೀಡಿ ಮತ್ತೆ ಹಳ್ಳಿಗೆ ಬರಲು ನಿರ್ಧರಿಸಿದರು. ಈ ಮಧ್ಯೆ ಅವರು ನೀರು ತರಲು ಗ್ರಾಮದ ಬಾವಿಗೆ ಹೋದಾಗ, ಗ್ರಾಮದ ಕೆಲವರು ಆಕ್ಷೇಪ ವ್ಯಕ್ತಪಡಿಸಿ ಅವರ ಮೇಲೆ ಹಲ್ಲೆ ಮಾಡಿದ್ದಾರೆ. ಭೋಕರೆ ಅವರ ತಲೆಗೆ ಪೆಟ್ಟು ಬಿದ್ದು ರಕ್ತಸ್ರಾವವಾಗಿದೆ. ಇದನ್ನು ತಡೆಯಲು ಮಧ್ಯ ಪ್ರವೇಶಿಸಿದವರ ಮೇಲೂ ಹಲ್ಲೆ ಮಾಡಲಾಗಿದ್ದು, 4 ಜನ ಗಾಯಗೊಂಡಿದ್ದಾರೆ. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಭೋಕರೆ ಸ್ಥಿತಿ ಗಂಭೀರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.