ಚೆನ್ನೈ: ಕೊರೊನಾ ಸೋಂಕಿನಿಂದ ಬಳಲುತ್ತಿದ್ದ ವ್ಯಕ್ತಿಯೋರ್ವ ಬಿರಿಯಾನಿ ನೀಡಲಿಲ್ಲ ಎಂಬ ಆಕ್ರೋಶದಿಂದ ಆಸ್ಪತ್ರೆಯ ಕಿಟಕಿ ಮುರಿದು ಹೊರಹೋಗಲು ಯತ್ನಿಸಿರುವ ಘಟನೆ ನಡೆದಿದೆ.
27 ವರ್ಷದ ಕೊರೊನಾ ಸೋಂಕಿತ ವ್ಯಕ್ತಿ ಚೆನ್ನೈನ ಇಎಸ್ಐ ಆಸ್ಪತ್ರೆಯಲ್ಲಿ ದಾಖಲಾಗಿದ್ದ. ಆತನಿಗೆ ರೋಗನಿರೋಧಕ ಶಕ್ತಿ ನೀಡುವ ಆಹಾರ ನೀಡಲಾಗುತ್ತಿತ್ತು. ಆದರೆ ಆಸ್ಪತ್ರೆ ಸಿಬ್ಬಂದಿ ಬಳಿ ತನಗೆ ಚಿಕನ್ ಬಿರಿಯಾನಿ ನೀಡುವಂತೆ ತಿಳಿಸಿದ್ದಾನೆ. ಇದಕ್ಕೆ ಅವರು ನಿರಾಕರಿಸಿದ್ದಾರೆ. ಇಷ್ಟಕ್ಕೆ ಸುಮ್ಮನಾಗದ ಆತ ಹೆಂಡತಿಗೆ ಫೋನ್ ಮಾಡಿ ಬಿರಿಯಾನಿ ಮಾಡಿಕೊಂಡು ಬರುವಂತೆ ತಿಳಿಸಿದ್ದಾನೆ.
ಗಂಡನ ಮಾತಿನಂತೆ ಬಿರಿಯಾನಿ ಮಾಡಿಕೊಂಡು ಆಸ್ಪತ್ರೆಗೆ ಬಂದ ಆಕೆ ವೈದ್ಯ ಸಿಬ್ಬಂದಿ ಕೈಯಲ್ಲಿ ಅದನ್ನು ನೀಡಿದ್ದಾಳೆ. ಆದರೆ ಸಿಬ್ಬಂದಿ ಅದನ್ನು ಆತನಿಗೆ ನೀಡಲು ನಿರಾಕರಿಸಿದ್ದು, ಈ ವಿಷಯ ಆತನಿಗೆ ಗೊತ್ತಾಗುತ್ತಿದ್ದಂತೆ ಆಕ್ರೋಶದಲ್ಲಿ ತಾನು ಚಿಕಿತ್ಸೆ ಪಡೆದುಕೊಳ್ಳುತ್ತಿದ್ದ ಆಸ್ಪತ್ರೆ ರೂಂನ ಕಿಟಕಿ ಮುರಿದು ಹೊರಹೋಗಲು ಯತ್ನಿಸಿದ್ದಾನೆ. ಈ ವೇಳೆ ಸಿಬ್ಬಂದಿ ಆತನನ್ನು ತಡೆದಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.