ರಾಯಪುರ: ಕೊರೊನಾ ಸೋಂಕಿನಿಂದ ತಪ್ಪಿಸಿಕೊಳ್ಳಲು ಜನರು ಎಲ್ಲ ರೀತಿಯ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುತ್ತಿದ್ದಾರೆ. ಮಾಸ್ಕ್, ಆಹಾರ ಪದ್ದತಿ ಮತ್ತು ಸ್ಯಾನಿಟೈಸರ್ ಜೊತೆಗೆ ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಲು ಜನ ವಿಟಮಿನ್ ಮಾತ್ರೆಗಳನ್ನು ಮೊರೆ ಹೋಗುತ್ತಿದ್ದಾರೆ.
ಮೆಡಿಕಲ್ ಸ್ಟೋರ್ ಮಾಲೀಕರ ಪ್ರಕಾರ ರಾಯಪುರದಲ್ಲಿ ಈ ದಿನಗಳಲ್ಲಿ ಮಾರುಕಟ್ಟೆಯಲ್ಲಿ ಮಲ್ಟಿ - ವಿಟಮಿನ್ ಮಾತ್ರೆಗಳ ಬೇಡಿಕೆ ಹೆಚ್ಚಾಗಿದೆ. ಹಿಂದಿನ ದಿನಗಳಿಗೆ ಹೋಲಿಸಿದರೆ 30 ರಿಂದ ಶೇ 40ರಷ್ಟು ಬೇಡಿಕೆ ಹೆಚ್ಚಾಗಿದೆ. ಆದರೆ, ಆರೋಗ್ಯದ ದೃಷ್ಟಿಯಿಂದ ಮಲ್ಟಿವಿಟಮಿನ್ ಮಾತ್ರೆಗಳು ಕೊರೊನಾಗೆ ಪರಿಣಾಮಕಾರಿಯಲ್ಲ ಎಂದು ವೈದ್ಯರು ಸ್ಪಷ್ಟಪಡಿಸಿದ್ದಾರೆ.
ಈ ಬಗ್ಗೆ ಮಾತನಾಡಿರುವ ಔಷಧ ಸಗಟು ವ್ಯಾಪಾರಿ ವಿನೋದ್ ಜಾದ್ವಾನಿ, ಕೊರೊನಾ ಅವಧಿಯಲ್ಲಿ ವಿಟಮಿನ್ ಸಿ ಮಾತ್ರೆಗಳ ಮಾರಾಟ ಗಮನಾರ್ಹವಾಗಿ ಹೆಚ್ಚಾಗಿದೆ. ಈ ವಿಟಮಿನ್ ಮಲ್ಟಿವಿಟಮಿನ್ ಮಾತ್ರೆಗಳನ್ನು ತಯಾರಿಸುವ ಅನೇಕ ಕಂಪನಿಗಳು ಇದ್ದು, ಔಷಧಗಳ ಕೊರತೆ ಸಹ ಇಲ್ಲ ಎಂದಿದ್ದಾರೆ.
ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿರುವ ಡಾ. ರಾಕೇಶ್ ಗುಪ್ತಾ, ಜನರು ಆಹಾರ ಪದ್ದತಿಯಿಂದ ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಬೇಕು. ಜನರು ಹಸಿರು ತರಕಾರಿಗಳು, ಹಣ್ಣುಗಳನ್ನು ಸೇವಿಸಿದರೆ ವಿಟಮಿನ್ ಮಾತ್ರೆ ಸೇವಿಸುವ ಅಗತ್ಯ ಇರುವುದಿಲ್ಲ. ಜತೆಗೆ ಯೋಗವನ್ನು ಅಳವಡಿಸಿಕೊಂಡರೆ ಇನ್ನೂ ಉತ್ತಮವಾಗಿರುತ್ತದೆ. ವೈದ್ಯರನ್ನು ಸಂಪರ್ಕಿಸದೇ ಔಷಧಗಳನ್ನು ತೆಗೆದುಕೊಳ್ಳುವುದು ಸೂಕ್ತವಲ್ಲ. ಇದು ಅಡ್ಡಪರಿಣಾಮಗಳನ್ನೂ ಉಂಟುಮಾಡಬಹುದು ಎಂದಿದ್ದಾರೆ.