ದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ಫೆಬ್ರವರಿ 12 ರ ನಂತರ ಇಂದು ದಾಖಲಾದ ವಾಯು ಗುಣಮಟ್ಟ ತೀವ್ರ ಕಳಪೆಯಾಗಿದೆ. ಉತ್ತಮ ಗಾಳಿ ಬೀಸುತ್ತಿರುವುದರಿಂದ ಇಂದು ಸ್ವಲ್ಪ ಮಟ್ಟಿಗೆ ಸುಧಾರಿಸುವ ಸಾಧ್ಯತೆ ಇದೆ ಎಂದು ಸರ್ಕಾರಿ ಸಂಸ್ಥೆಗಳು ವರದಿ ಮಾಡಿವೆ.
ನಗರದ ಸುತ್ತಮುತ್ತ ಕೃಷಿ ತ್ಯಾಜ್ಯ ಸುಡುತ್ತಿರುವುದರಿಂದ ಶೇಕಡಾ 18 ರಷ್ಟು ವಾಯುಮಾಲಿನ್ಯ ಹೆಚ್ಚಾಗಿದೆ. ಬೆಳಗ್ಗೆ 10 ಗಂಟೆ ವೇಳಗೆ 263 ಎಕ್ಯೂಐ ದಾಖಲಾಗಿದ್ದು, ಕಳೆದ 24 ಗಂಟೆಗಳಲ್ಲಿ ಸರಾಸರಿ 239 ಎಕ್ಯೂಐ ದಾಖಲಾಗಿದೆ.
ಭಾರತ ಹವಾಮಾನ ಇಲಾಖೆಯ (ಐಎಂಡಿ) ಹಿರಿಯ ವಿಜ್ಞಾನಿಯೊಬ್ಬರ ಪ್ರಕಾರ, ಶುಕ್ರವಾರ ಗರಿಷ್ಠ ಗಾಳಿಯ ವೇಗ ಸೆಕೆಂಡ್ಗೆ 10 ಕಿಲೋಮೀಟರ್ ಇದ್ದು, ಇಂದು 12 ಕಿ.ಮೀ ವೇಗದಲ್ಲಿರಬಹುದು.ಇದರಿಂದ ವಾಯುಮಾಲಿನ್ಯ ಮತ್ತಷ್ಟು ವ್ಯಾಪಿಸುತ್ತೆ ಎಂದು ಅಂದಾಜಿಸಿದ್ದಾರೆ.
ಪ್ರತಿ ಸೆಕೆಂಡಿಗೆ 9,500 ಕಿ.ಲೋ ಮೀಟರ್ ಗಾಳಿಯ ವೇಗವಿದ್ದು, ಮಾಲಿನ್ಯ ಮತ್ತಷ್ಟು ಹರಡಬಹುದು ಎಂದು ದೆಹಲಿಯ ಭೂ ವಿಜ್ಞಾನ ಸಚಿವಾಲಯ ತಿಳಿಸಿದೆ.
ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಈ ವರ್ಷ ಸೆಪ್ಟೆಂಬರ್ 1 ರಿಂದ ಅಕ್ಟೋಬರ್ 14 ರವರೆಗೆ ವಾಯುಮಾಲಿನ್ಯ ದಟ್ಟವಾಗಿದೆ ಎಂದು ಸಿಪಿಸಿಬಿ ಸದಸ್ಯ ಕಾರ್ಯದರ್ಶಿ ಪ್ರಶಾಂತ್ ಗರ್ಗವ್ ಅಭಿಪ್ರಾಯ ಪಟ್ಟಿದ್ದಾರೆ. 2019 ಕ್ಕೆ ಹೋಲಿಸಿದರೆ, ಈ ವರ್ಷ ಕೃಷಿ ತ್ಯಾಜ್ಯ ಸುಡುವ ಘಟನೆಗಳು ಕಡಿಮೆಯಾಗಲಿವೆ. ಏಕೆಂದರೆ ಈ ಬಾರಿ ಬಾಸ್ಮತಿ ಅಲ್ಲದ ಭತ್ತದ ಕೃಷಿ ಕಡಿಮೆಯಾಗಿದೆ. ಇದರಿಂದ ಜಾನುವಾರುಗಳಿಗೆ ಮೇವು ಸಿಗಲಿದ್ದು, ತ್ಯಾಜ್ಯ ಸುಡುವುದು ಕಡಿಮೆಯಾಗುತ್ತೆ ಎಂದಿದ್ದಾರೆ.
ಥಿಂಕ್ ಟ್ಯಾಂಕ್ ಕೌನ್ಸಿಲ್ ಆನ್ ಎನರ್ಜಿ ವಿಶ್ಲೇಷಣೆಯ ಪ್ರಕಾರ, ಸಾರಿಗೆಯಿಂದ ಶೇಕಡ 18 ರಿಂದ 39, ಕೈಗಾರಿಕೆಗಳಿಂದ ಶೇಕಡ 2 ರಿಂದ 29, ವಿದ್ಯುತ್ ಸ್ಥಾವರಗಳಿಂದ ಶೇಕಡ 3 ರಿಂದ 11 ಮತ್ತು ಕಟ್ಟಡ, ರಸ್ತೆ ನಿರ್ಮಾಣದಿಂದ ಶೇಕಡ 8 ರಷ್ಟು ವಾಯುಮಾಲಿನ್ಯ ಉಂಟಾಗುತ್ತದೆ ಎಂದು ತಿಳಿಸಿದೆ.
0 ರಿಂದ 50 ರ ನಡುವಿನ ಎಕ್ಯೂಐ ಅನ್ನು ಉತ್ತಮ, 51 ರಿಂದ 100 ತೃಪ್ತಿದಾಯಕ, 101 ರಿಂದ 200 ಮಧ್ಯಮ, 201 ರಿಂದ 300 ಕಳಪೆ, 301 ರಿಂದ 400 ತೀರಾ ಕಳಪೆ, ಮತ್ತು 401 ರಿಂದ 500 ಎಕ್ಯೂಐ ಅನ್ನು ತೀವ್ರ ಕಳಪೆ ಗುಣಮಟ್ಟದ ವಾಯುಮಾಲಿನ್ಯ ಎಂದು ಪರಿಗಣಿಸಲಾಗುತ್ತದೆ.