ನವದೆಹಲಿ: ಈಶಾನ್ಯ ದೆಹಲಿ ಹಿಂಸಾಚಾರದ ತನಿಖೆ ದಿನದಿಂದ ದಿನಕ್ಕೆ ತೀವ್ರಗೊಳ್ಳುತ್ತಿದೆ. ಈ ಹಿಂಸಾಚಾರದ ಪ್ರಮುಖ ಆರೋಪಿಗಳಾದ ಮುನ್ಸಿಪಲ್ ಕೌನ್ಸಿಲರ್ ತಾಹೀರ್ ಹುಸೇನ್, ಇಶ್ರತ್ ಜಹಾನ್, ಖಾಲಿದ್ ಸೈಫಿ, ಶಫಾ-ಉರ್-ರಹಮಾನ್ ಹಾಗೂ ಮೀರನ್ ಹೈದರ್ ವಿರುದ್ಧ ತನಿಖೆಯ ವೇಳೆ ಕೆಲವೊಂದು ಸ್ಫೋಟಕ ಮಾಹಿತಿಗಳು ಬಹಿರಂಗವಾಗಿವೆ.
ತನಿಖೆ ನಡೆಸುತ್ತಿರುವ ದೆಹಲಿಯ ಪೊಲೀಸರ ವಿಶೇಷ ಘಟಕವು ಸುಮಾರು 1,61,33,703 ಕೋಟಿ ರೂಪಾಯಿ ಹಣ ಈ ಆರೋಪಿಗಳಿಗೆ ಬ್ಯಾಂಕ್ ಖಾತೆ ಅಥವಾ ನಗದು ಮೂಲಕ ವರ್ಗಾವಣೆಯಾಗಿದೆ ಎಂದು ಉಲ್ಲೇಖಿಸಿದೆ.
ಡಿಸೆಂಬರ್ 2019 ಹಾಗೂ ಫೆಬ್ರವರಿ 2020ರ ನಡುವೆ ಈ ಹಣದ ವ್ಯವಹಾರ ನಡೆದಿದ್ದು, ಸುಮಾರು 1.48 ಕೋಟಿ ರೂಪಾಯಿಯನ್ನು ಗಲಭೆಗಳನ್ನು ಸೃಷ್ಟಿಸಲು, ಪ್ರತಿಭಟನೆಗಳನ್ನು ನಡೆಸಲು ಬಳಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಈ ಹಿನ್ನೆಲೆ ಕಠಿಣ ಕಾನೂನು ಬಾಹಿರ ಚಟುವಟಿಕೆಗಳ ನಿಯಂತ್ರಣ ಕಾಯ್ದೆ ಅಡಿಯಲ್ಲಿ ದೂರು ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದ್ದು, ಹಣದ ಮೂಲಗಳ ನಿಖರ ಮಾಹಿತಿಯನ್ನು ಕಲೆಹಾಕಲಾಗುತ್ತಿದೆ.
ಈ ಹಣವನ್ನು ಪಡೆದುಕೊಳ್ಳಬೇಕಾದರೆ ತಾಹೀರ್ ಹುಸೇನ್ ನಕಲಿ ಕಂಪನಿಗಳ ಹೆಸರುಗಳನ್ನು ಬಳಸಿದ್ದಾನೆ ಎಂದು ಚಾರ್ಜ್ಶೀಟ್ನಲ್ಲಿ ಉಲ್ಲೇಖಿಸಲಾಗಿದ್ದು, ಕೆಲವು ನಕಲಿ ಕಂಪನಿಗಳ ವಿರುದ್ಧ ಇನ್ನೂ ತನಿಖೆ ನಡೆಯುತ್ತಿದೆ.
ಇದರ ಜೊತೆಗೆ ಆರೋಪಿಯಾದ ಇಶ್ರತ್ ಜಹಾನ್ ಸಹೋದರ ಇಮ್ರಾನ್, ''ತನ್ನ ಸಹೋದರಿಯಿಂದ 4 ಲಕ್ಷ ರೂಪಾಯಿಯನ್ನು ವ್ಯಾಪಾರಕ್ಕೆ ತೆಗೆದುಕೊಂಡಿದ್ದೇನೆ'' ಎಂದು ಹೇಳಿಕೆ ನೀಡಿದ್ದು ಆದಾಯ ತೆರಿಗೆ ಸಲ್ಲಿಕೆ ಬಗ್ಗೆ ಹಾಗೂ ಅಧಿಕಾರಿಗಳು ಕೇಳಿದ ಪ್ರಶ್ನೆಗಳಿಗೆ ಸರಿಯಾದ ಉತ್ತರ ನೀಡಿಲ್ಲ ಎಂದು ಪೊಲೀಸರು ಸಲ್ಲಿಸಿದ ಚಾರ್ಜ್ಶೀಟ್ನಲ್ಲಿ ಉಲ್ಲೇಖಿಸಲಾಗಿದೆ.
ಇಶ್ರತ್ ಜಹಾನ್ ಬ್ಯಾಂಕ್ ಖಾತೆಯನ್ನು ಪರಿಶೀಲನೆ ನಡೆಸಿದಾಗ ಅವರ ಖಾತೆಯಲ್ಲಿ 1.41 ಕೋಟಿ ರೂಪಾಯಿ ಹಣವಿದ್ದು, ಅದರ ಮೂಲದ ಬಗ್ಗೆಯೂ ತೀವ್ರ ಚರ್ಚೆ ನಡೆದಿದೆ. ಈ ಹಣವನ್ನೂ ಕೂಡ ಗಲಭೆಗಳಿಗೆ ಬಳಸಿಕೊಂಡಿರುವ ಸಾಧ್ಯತೆಯಿದೆ ಎನ್ನಲಾಗಿದೆ.