ನವದೆಹಲಿ: ದೆಹಲಿಯ ತೀಸ್ ಹಜಾರಿ ನ್ಯಾಯಾಲಯದ ಆವರಣದಲ್ಲಿ ಪೊಲೀಸರು ಹಾಗೂ ವಕೀಲರ ನಡುವೆ ನಡೆದ ಘರ್ಷಣೆಗೆ ಸಂಬಂಧಿಸಿದಂತೆ ಐಪಿಎಸ್ ಅಧಿಕಾರಿಗಳ ಸಂಘಟನೆಗಳು ಖಂಡಿಸಿವೆ.
ಬಿಹಾರ, ಹರಿಯಾಣ ಮತ್ತು ತಮಿಳುನಾಡು ಐಪಿಎಸ್ ಪೊಲೀಸ್ ಸಂಘಟನೆಗಳು ದೆಹಲಿ ಪೊಲೀಸರಿಗೆ ಬೆಂಬಲ ವ್ಯಕ್ತಪಡಿಸಿವೆ. ಘಟನೆಯನ್ನು ಖಂಡಿಸಿ ಈ ಬಗ್ಗೆ ತಮ್ಮ ಬೆಂಬಲದ ಪತ್ರವನ್ನು ರವಾನಿಸಿವೆ. ದೆಹಲಿ ಪೊಲೀಸ್ ಸಂಘಟನೆ ಸದಸ್ಯ ಪೊಲೀಸ್ ಸಿಬ್ಬಂದಿ ಹೆಡ್ ಕ್ವಾಟರ್ ಆವರಣದ ಮುಂಭಾಗದಲ್ಲಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಪ್ರತಿಭಟನೆ ನಡೆಸುತ್ತಿದ್ದಾರೆ.
ತೀಸ್ ಹಜಾರಿ ನ್ಯಾಯಾಲಯದ ಘಟನೆಯ ಬಗ್ಗೆ ಪ್ರತಿಕ್ರಿಯಿಸಿದ ಅಖಿಲ ಭಾರತ ಬಾರ್ ಅಸೋಸಿಯೇಷನ್‌ನ ಅಧ್ಯಕ್ಷ ಆದಿಶ್ ಅಗರ್‌ವಾಲ್ ಅವರು, ಪೊಲೀಸ್ ಸಿಬ್ಬಂದಿಗೆ ಪ್ರತಿಭಟಿಸಲು ಮತ್ತು ತಮ್ಮ ಬೇಡಿಕೆಗಳನ್ನು ಆಡಳಿತ ಯಂತ್ರದ ಮುಂದೆ ಇರಿಸಲು ತಮ್ಮದೇಯಾದ ಹಕ್ಕುಗಳಿವೆ ಎಂದಿದ್ದಾರೆ.
ದೆಹಲಿಯಲ್ಲಿ ಪೊಲೀಸ್ ಅಸೋಸಿಯೇಷನ್ ದೊಡ್ಡ ಮಟ್ಟದಲ್ಲಿ ಪ್ರತಿಭಟನೆ ನಡೆಸುತ್ತಿರುವುದು ಇದೇ ಮೊದಲು. ಇದೊಂದು ಸಣ್ಣ ಘಟನೆಯಾಗಿದ್ದು, ಅದು ಇಡೀ ಸಂಘಟನೆಯಲ್ಲಿ ಕಾಡ್ಗಿಚ್ಚಿನಂತೆ ಹರಡಿತು. ಎರಡೂ ಕಡೆಯ ಸಿಬ್ಬಂದಿ ತಮ್ಮ ಕರ್ತವ್ಯವನ್ನು ಸಮರ್ಪಕವಾಗಿ ಮಾಡಿಲ್ಲ ಎಂದು ನಾನು ಭಾವಿಸುತ್ತೇನೆ ಎಂದು ಹಿರಿಯ ವಕೀಲರು ಹೇಳಿದರು.
ತೀಸ್ ಹಜಾರಿ ಕೋರ್ಟ್ ಆವರಣದಲ್ಲಿನ ಘರ್ಷಣೆಗೆ ಸಂಬಂಧಿಸಿದಂತೆ ಭಾನುವಾರದ ಆದೇಶವನ್ನು ಸ್ಪಷ್ಟಪಡಿಸುವಂತೆ ಕೋರಿ ಗೃಹ ಸಚಿವಾಲಯ (ಎಂಹೆಚ್‌ಎ) ಮಂಗಳವಾರ ದೆಹಲಿ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದೆ. ಈ ಆದೇಶವು ದಾಖಲಾದ ಎಫ್‌ಐಆರ್‌ಗಳಿಗೆ ಮಾತ್ರ ಸಂಬಂಧಿಸಿದೆ. ನವೆಂಬರ್ 2ರಂದು ಘಟನೆ ನಡೆದಿದ್ದ ಘರ್ಷಣೆಗೆ ಮಾತ್ರ ಅನ್ವಯಿಸಲಿದೆ. ನಂತರ ನಡೆದ ಯಾವುದೇ ಘಟನೆಗೆ ಇದು ಅನ್ವಯಿಸುವುದಿಲ್ಲ. ಘಟನೆಯಲ್ಲಿ ಆರು ಎಫ್ಐಆರ್ ದಾಖಲಾಗಿವೆ ಎಂದು ತಿಳಿದುಬಂದಿದೆ.