ನವದೆಹಲಿ / ಚಂಡೀಗಢ: ರಾಷ್ಟ್ರ ರಾಜಧಾನಿಯಲ್ಲಿ ಗಣರಾಜ್ಯೋತ್ಸವದಂದು ರೈತರು ಬೃಹತ್ ಟ್ರ್ಯಾಕ್ಟರ್ ಮೆರವಣಿಗೆ ಹಮ್ಮಿಕೊಂಡಿದ್ದು, ಇದಕ್ಕೆ ಅಡ್ಡಿಪಡಿಸುವ ಪ್ರಯತ್ನಗಳಾಗುತ್ತಿವೆ. ಆದ್ದರಿಂದ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗುವುದು ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ.
ಜನರ ದಾರಿ ತಪ್ಪಿಸಲು ಹಾಗೂ ಟ್ರ್ಯಾಕ್ಟರ್ ಪರೇಡ್ಗೆ ಅಡ್ಡಿಪಡಿಸಲು ಪಾಕಿಸ್ತಾನದಿಂದ 300 ಕ್ಕೂ ಹೆಚ್ಚು ಟ್ವಿಟರ್ ಹ್ಯಾಂಡಲ್‌ಗಳನ್ನು ರಚಿಸಲಾಗಿದೆ ಎಂದು ವಿಶೇಷ ಪೊಲೀಸ್ ಆಯುಕ್ತ (ಗುಪ್ತಚರ) ದೀಪೇಂದ್ರ ಪಾಠಕ್ ಹೇಳಿದ್ದಾರೆ.
ದೆಹಲಿ ಪೊಲೀಸ್ ಆಯುಕ್ತ ಎಸ್.ಎನ್. ಶ್ರೀವಾಸ್ತವ ಈ ಕುರಿತು ಸುತ್ತೋಲೆ ಹೊರಡಿಸಿದ್ದು, ಗಣರಾಜ್ಯೋತ್ಸವ ಪರೇಡ್ ಮತ್ತು ಟ್ರ್ಯಾಕ್ಟರ್ ಮೆರವಣಿಗೆಯ ಹಿನ್ನೆಲೆಯಲ್ಲಿ ಭದ್ರತಾ ವ್ಯವಸ್ಥೆಗಳಿಗಾಗಿ ಪೋಸ್ಟ್ ಮಾಡಿದ ಎಲ್ಲ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಮತ್ತು ಕೇಂದ್ರ ಸಶಸ್ತ್ರ ಪೊಲೀಸ್ ಪಡೆ (ಸಿಎಪಿಎಫ್) ಮತ್ತು ಇತರ ಸಿಬ್ಬಂದಿಗಳು ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ವಿಸ್ತೃತ ನಿಯೋಜನೆಗೆ ಸಿದ್ಧರಾಗಿರಬೇಕು ಎಂದು ನಿರ್ದೇಶಿಸಿದ್ದಾರೆ.
ಓದಿ : ದೆಹಲಿ ಮೆಟ್ರೋನಲ್ಲಿ ಟ್ರ್ಯಾಕ್ಟರ್ ಪೆರೇಡ್ ಬೆಂಬಲಿಸುವಂತೆ ವ್ಯಕ್ತಿಯೊಬ್ಬನಿಂದ ಘೋಷಣೆ: ಅಧಿಕಾರಿಗಳಿಂದ ತನಿಖೆ
ಜನರನ್ನು ದಾರಿ ತಪ್ಪಿಸುವ ಮೂಲಕ ರೈತರು ಟ್ರ್ಯಾಕ್ಟರ್ ರ‍್ಯಾಲಿಯನ್ನು ಅಡ್ಡಿಪಡಿಸಲು ಜನವರಿ 13 ರಿಂದ 18 ರವರೆಗೆ ಪಾಕಿಸ್ತಾನದಿಂದ 300 ಕ್ಕೂ ಹೆಚ್ಚು ಟ್ವಿಟರ್ ಹ್ಯಾಂಡಲ್‌ಗಳನ್ನು ರಚಿಸಲಾಗಿದೆ. ವಿವಿಧ ಏಜೆನ್ಸಿಗಳಿಂದಲೂ ಇದರ ಬಗ್ಗೆ ಮಾಹಿತಿ ಲಭಿಸಿದೆ. "ಇದು ನಮಗೆ ಸವಾಲಿನ ಕೆಲಸವಾಗಲಿದೆ. ಆದರೆ ಗಣರಾಜ್ಯೋತ್ಸವದ ಮೆರವಣಿಗೆ ಮುಗಿದ ನಂತರ ಟ್ರ್ಯಾಕ್ಟರ್ ರ‍್ಯಾಲಿಯನ್ನು ಬಿಗಿ ಭದ್ರತೆಯ ನಡುವೆ ನಡೆಸಲಾಗುವುದು" ಎಂದು ಪಾಠಕ್ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.