ನವದೆಹಲಿ: ನಿರ್ಭಯಾ ಅತ್ಯಾಚಾರ ಪ್ರಕರಣದ ಆರೋಪಿಗಳಿಗೆ ವಿಧಿಸಲಾಗಿರುವ ಮರಣ ದಂಡನೆ ಶಿಕ್ಷೆಯನ್ನು ಯಾವುದೇ ಕಾರಣಕ್ಕೂ ವಿಳಂಬ ಮಾಡಬಾರದು ಅಂತ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ದೆಹಲಿ ಹೈಕೋರ್ಟ್ಗೆ ತಿಳಿಸಿದ್ದಾರೆ.
2012ರ ನಿರ್ಭಯಾ ಅತ್ಯಾಚಾರ ಪ್ರಕರಣದ ನಾಲ್ಕು ಆರೋಪಿಗಳಿಗೆ ವಿಧಿಸಲಾಗಿರುವ ಮರಣದಂಡನೆ ಆದೇಶಕ್ಕೆ ತಡೆ ನೀಡಿರುವ ಕುರಿತು ಇಂದು ದೆಹಲಿ ಕೋರ್ಟ್ನಲ್ಲಿ ಅವರು ವಾದ ಮಂಡಿಸಿದ್ರು. ಅಪರಾಧಿಯ ಕಡೆಯಿಂದ ಮರಣ ದಂಡನೆ ಉದ್ದೇಶಪೂರ್ವಕವಾಗಿ ವಿಳಂಬವಾಗಿದೆ. ಯಾವುದೇ ಕಾರಣದಿಂದಲೂ ಅಪರಾಧಿಗೆ ವಿಧಿಸಲಾಗಿರುವ ಮರಣ ದಂಡನೆ ಶಿಕ್ಷೆ ತಡವಾಗಬಾರದು, ಒಂದು ವೇಳೆ ವಿಳಂಬವಾದರೆ ಅದು ಅಪರಾಧಿಯ ಮೇಲೆ ಅಮಾನವೀಯ ಪರಿಣಾಮ ಬೀರುವ ಸಾಧ್ಯತೆ ಇದ್ದು, ಇದು ನ್ಯಾಯದ ಹಿತದೃಷ್ಟಿಯಿಂದ ಸರಿಯಲ್ಲ ಎಂದು ತಿಳಿಸಿದರು.
ಒಂದು ಸಲ ಈ ಅಪರಾಧಿಗಳ ಹಣೆಬರಹವನ್ನು ಸುಪ್ರೀಂಕೋರ್ಟ್ ನಿರ್ಧರಿಸಿದ ಮೇಲೆ, ಅವರನ್ನು ಗಲ್ಲಿಗೇರಿಸುವುದನ್ನು ತಡೆಯುವಂತಿಲ್ಲ, ಅಲ್ಲದೇ ಜೈಲಿನ ನಿಯಮಗಳ ಪ್ರಕಾರ , ಗಲ್ಲು ಶಿಕ್ಷೆ ಮುಂದೂಡಲು ಇರುವ ಕೊನೆಯ ಕಾನೂನಾತ್ಮಕ ದಾರಿ ಎಂದರೆ ಅದು ಸುಪ್ರೀಂ ಮುಂದಿನ ವಿಶೇಷ ರಜಾ ಅರ್ಜಿಗಳು ಮಾತ್ರ ಎಂದು ಸಾಲಿಟರಿ ಜನರಲ್ ಹೇಳಿದರು.
ದೆಹಲಿ ಜೈಲು ನಿಯಮಗಳ ಅನ್ವಯ "ಮೇಲ್ಮನವಿ ಅಥವಾ ಅರ್ಜಿ" ಬಾಕಿ ಉಳಿದಿದ್ದರೆ ಮಾತ್ರ ಅಪರಾಧಿಗಳನ್ನು ಒಟ್ಟಿಗೆ ಗಲ್ಲಿಗೇರಿಸಬೇಕಾಗುತ್ತದೆ. ಆದ್ರೆ ಇದು ಕ್ಷಮಾದಾನ ಅರ್ಜಿಗಳಿಗೆ ಅನ್ವಯಿಸುವುದಿಲ್ಲ. ಅವು ಪ್ರತ್ಯೇಕವಾಗಿದ್ದು, ಈ ಅರ್ಜಿಗಳಲ್ಲಿ ಸೇರುವುದಿಲ್ಲ ಎಂದು ವಾದಿಸಿದ್ರು. ಇನ್ನು ಕ್ಷಮಾದಾನ ಅರ್ಜಿ ವೈಯುಕ್ತಿಕ ನ್ಯಾಯವ್ಯಾಪ್ತಿಗೆ ಒಳಪಟ್ಟಿದೆ. ಒಂದು ವೇಳೆ ರಾಷ್ಟ್ರಪತಿಗಳು ಸಂದರ್ಭ ನೋಡಿಕೊಂಡು ಕ್ಷಮಾದಾನ ನೀಡಬಹುದು ಆದರೆ ಇದು ಬೇರೆ ಅಪರಾಧಿಗಳಿಗೆ ಹೇಗೆ ಅನ್ವಯವಾಗುತ್ತದೆ ಎಂದು ಪ್ರಶ್ನಿಸಿದ್ರು.
ಅಪರಾಧಿಗಳನ್ನು ಗಲ್ಲಿಗೇರಿಸುವ ಮೊದಲು ಮರಣದಂಡನೆಗೊಳಗಾದ ಅಪರಾಧಿಗಳನ್ನು ನೋಡಿಕೊಳ್ಳಲು ಕಾನೂನಿಗೆ 14 ದಿನಗಳ ನೋಟಿಸ್ ಅವಧಿ ನೀಡಬೇಕು. ಆದರೆ ಈ ಕೇಸ್ನಲ್ಲಿ ಅಪರಾಧಿ 13 ನೇ ದಿನ ಮರಣದಂಡನೆ ತಡೆ ಹಿಡಿಯುವಂತೆ ಕೋರಿ ಮನವಿ ಅರ್ಜಿ ಸಲ್ಲಿಸಿದ್ದಾನೆ.
ಇನ್ನು ಮರಣದಂಡನೆ ನೀಡಲು ಇರುವ ಅಧಿಕಾರವೇ ಅಪಾಯದಲ್ಲಿದೆ. ತೆಲಂಗಾಣದಲ್ಲಿ ಪಶುವೈದ್ಯೆ ದಿಶಾ ಅತ್ಯಾಚಾರ ಹಾಗೂ ಹತ್ಯೆ ಪ್ರಕರಣದ ಆರೋಪಿಗಳ ಎನ್ಕೌಂಟರ್ ನಡೆದಾಗ ಜನ ಸಂಭ್ರಮಿಸಿದ್ದು, ನ್ಯಾಯ ಸಿಕ್ಕಿದ್ದಕ್ಕೆ ಆಚರಿಸಿದ ಸಂಭ್ರಮವೇ ಹೊರತು ಪೊಲೀಸರ ಸಂಭ್ರಮವಾಗಿರಲಿಲ್ಲ ಎಂದರು.
ತಮ್ಮ ವಾದವನ್ನು ಮುಂದುವರಿಸಿದ ಸಾಲಿಸಿಟರ್ ಜನರಲ್ ತುಷಾರ್ ಪ್ರತಿಯೊಬ್ಬ ಅಪರಾಧಿಯು ದೇಶದ ನ್ಯಾಯಾಂಗ ವ್ಯವಸ್ಥೆಯು ಸೋಲನ್ನು ಕಂಡು ಆನಂದ ಪಡುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ರು.