ನವದೆಹಲಿ/ ಬೆಂಗಳೂರು : ಅಕ್ರಮ ಹಣ ವರ್ಗಾವಣೆ ತಡೆ ಪ್ರಕರಣದಲ್ಲಿ ಬಂಧಿಯಾಗಿದ್ದ ಕಾಂಗ್ರೆಸ್ ಮುಖಂಡ, ಮಾಜಿ ಸಚಿವ ಡಿ.ಕೆ ಶಿವಕುಮಾರ್ಗೆ ದೆಹಲಿ ಹೈಕೋರ್ಟ್ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ.
ನ್ಯಾಯಮೂರ್ತಿ ಸುರೇಶ್ ಕುಮಾರ್ ಕೈಟ್ ಅವರಿದ್ದ ಏಕಸದಸ್ಯ ಪೀಠ ಡಿ.ಕೆ ಶಿವಕುಮಾರ್ ಅವರಿಗೆ 25 ಲಕ್ಷ ರೂ ವೈಯಕ್ತಿಕ ಬಾಂಡ್, ಇಬ್ಬರ ಶ್ಯೂರಿಟಿ, ವಿದೇಶಕ್ಕೆ ಹೋಗುವುದಾದರೆ ಕೋರ್ಟ್ ಅನುಮತಿ ಪಡೆಯಬೇಕು, ವಿಚಾರಣೆಗೆ ಕರೆದಾಗ ಹಾಜರಾಗಬೇಕು ಎಂಬ ಷರತ್ತು ವಿಧಿಸಿ ಬೇಲ್ ಮಂಜೂರು ಮಾಡಿದೆ.
ಡಿ ಕೆ ಶಿವಕುಮಾರ್ ಅವರನ್ನು ಸೆ. 3ರಂದು ಜಾರಿ ನಿರ್ದೇಶನಾಲಯ (ಇಡಿ) ಬಂಧಿಸಿತ್ತು. ಬಳಿಕ ಅ.17ರಂದು ವಾದ ಪ್ರತಿವಾದ ಆಲಿಸಿದ ನ್ಯಾಯಾಲಯವು ಜಾಮೀನು ಅರ್ಜಿಯ ತೀರ್ಪು ಕಾಯ್ದಿರಿಸಿತ್ತು. ಅ. 25 ರಿಂದ ಡಿಕೆಶಿಯನ್ನು ದೆಹಲಿಯ ತಿಹಾರ್ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿ ಇರಿಸಲಾಗಿತ್ತು.
ತಾವು ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ರೋಸ್ ಅವೆನ್ಯೂ ಕೋರ್ಟ್ ತಿರಸ್ಕರಿಸಿದ ನಂತರ, ಡಿಕೆಶಿ ದೆಹಲಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಈ ಕುರಿತ ವಿಚಾರಣೆಯ ಸಮಯದಲ್ಲಿ 317 ಬ್ಯಾಂಕ್ ಖಾತೆಗಳನ್ನು ಒಳಗೊಂಡಿರುವ ಪಟ್ಟಿಯನ್ನು ಒಳಗೊಂಡಂತೆ ಹಲವಾರು ದಾಖಲೆಗಳನ್ನು ಹೈಕೋರ್ಟ್ ಮುಂದೆ ಇಡಿ ವಕೀಲರು ಹಾಜರುಪಡಿಸಿದ್ದರು.
ವಾದ-ಪ್ರತಿವಾದಗಳನ್ನು ಆಲಿಸಿದ ನ್ಯಾ. ಸುರೇಶ್ ಕುಮಾರ್ ಕೈಟ್, ಆದೇಶ ಪ್ರತಿಯಲ್ಲಿ 120 ಬಿ ಸೆಕ್ಷನ್ ಕುರಿತು ಉಲ್ಲೇಖಿಸಿ ಜಾಮೀನು ಮಂಜೂರು ನೀಡಿದ್ದಾರೆ.