ನವದೆಹಲಿ: ಐಎನ್ಎಕ್ಸ್ ಮಿಡಿಯಾ ಹಗರಣದಲ್ಲಿ ಜೈಲು ಸೇರಿರುವ ಮಾಜಿ ಕೇಂದ್ರ ಸಚಿವ ಪಿ.ಚಿದಂಬರಂ ಅವರನ್ನು ಜಾರಿ ನಿರ್ದೇಶನಾಲಯ ಅಧಿಕಾರಿಗಳು ಬಂಧಿಸುವ ವಿಚಾರಕ್ಕೆ ಸಂಬಂಧಿಸಿದಂತೆ ದೆಹಲಿಯ ವಿಶೇಷ ನ್ಯಾಯಾಲಯ ತನ್ನ ತೀರ್ಪನ್ನು ಇಂದು ಸಂಜೆ 4 ಗಂಟೆಗೆ ಪ್ರಕಟಿಸಲಿದೆ.
ಐಎನ್ಎಕ್ಸ್ ಮೀಡಿಯಾ ಹಗರಣದಲ್ಲಿ ಚಿದಂಬರಂ ವ್ಯವಹಾರ ನೇರವಾಗಿಲ್ಲ ಮತ್ತು ಅವರು ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆಯನ್ನು ಮುರಿದಿದ್ದಾರೆ ಎಂದು ಜಾರಿ ನಿರ್ದೇಶನಾಲಯ ಪರ ವಕೀಲರು ಕೋರ್ಟ್ನಲ್ಲಿ ವಾದಿಸಿದ್ದು, ಚಿದು ಬಂಧಿಸಿ ವಿಚಾರಣೆಗೆ ಒಪ್ಪಿಸಲು ಇಡಿ ಮನವಿ ಮಾಡಿಕೊಂಡಿದೆ.
ಇಡಿ ಪರ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ತಮ್ಮ ವಾದ ಸೋಮವಾರ ಮಂಡಿಸಿದ್ದು, ಚಿದಂಬರಂ ಪರ ವಕೀಲ ಕಪಿಲ್ ಸಿಬಲ್ ಈ ವಾದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಚಿದಂಬರಂ ಅವರನ್ನು ಈಗಾಗಲೇ ಸಿಬಿಐ ಬಂಧಿಸಿದ್ದು ಅವರ ನ್ಯಾಯಾಂಗ ಬಂಧನ ಅ.17ರಂದು ಮುಕ್ತಾಯವಾಗಲಿದೆ. ಕೇಂದ್ರದಲ್ಲಿ ವಿತ್ತ ಸಚಿವರಾಗಿದ್ದಾಗ ವಿದೇಶಿ ಹೂಡಿಕೆಯಲ್ಲಿ ಐಎನ್ಎಕ್ಸ್ ಮೀಡಿಯಾಗೆ ಸಹಕಾರ ನೀಡಿದ್ದಾರೆ ಎನ್ನುವ ಗುರುತರ ಆರೋಪ ಅವರ ಮೇಲಿದೆ. ಈ ಪ್ರಕರಣ ಇಡಿ ವ್ಯಾಪ್ತಿಗೂ ಬರುವುದರಿಂದ ಸದ್ಯ ತನ್ನ ವಶಕ್ಕೊಪ್ಪಿಸುವಂತೆ ಕೋರ್ಟ್ ಮುಂದೆ ಮನವಿ ಮಾಡಿಕೊಂಡಿದೆ.