ನವದೆಹಲಿ: ದೆಹಲಿ ನಿವಾಸದಲ್ಲಿ ಪತ್ತೆಯಾದ 8.6 ಕೋಟಿ ರೂ. ಅಕ್ರಮ ಹಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯದ (ಇಡಿ) ವಿಚಾರಣೆಗೊಳಪಟ್ಟಿರುವ ಮಾಜಿ ಇಂಧನ ಸಚಿವ ಡಿ.ಕೆ. ಶಿವಕುಮಾರ್ ಜಾಮೀನು ಅರ್ಜಿ ವಿಚಾರಣೆಯನ್ನು ಇಡಿ ವಿಶೇಷ ನ್ಯಾಯಾಲಯ ನಾಳೆಗೆ (ಗುರುವಾರ) ಮುಂದೂಡಿದೆ.
ವಿಶೇಷ ನ್ಯಾಯಾಲಯ ಡಿಕೆಶಿಯ ಜಾಮೀನು ಅರ್ಜಿ ವಿಚಾರಣೆಯನ್ನು ನಾಳೆ (ಗುರುವಾರ) ಮಧ್ಯಾಹ್ನ 3 ಗಂಟೆಗೆ ನಡೆಸಲಿದೆ ಎಂದು ನ್ಯಾಯಮೂರ್ತಿ ಅಜಯ್ ಕುಮಾರ್ ಕುಹಾರ್ ಅವರು ಹೇಳಿದ್ದಾರೆ.
ಡಿಕೆಶಿ ಪರವಾಗಿ ವಕೀಲರಾದ ಅಭಿಷೇಕ್ ಮನು ಸಿಂಘ್ವಿ ಹಾಗೂ ಮುಕುಲ್ ರೋಹ್ಟಗಿ ವಾದ ಮಂಡಿಸುತ್ತಿದ್ದು, ಇಡಿ ಪರವಾಗಿ ಹೆಚ್ಚುವರಿ ಸಾಲಿಸಿಟರ್ ಜನರಲ್ ಕೆ.ಎಂ.ನಟರಾಜ್ ವಾದ ಮಾಡುತ್ತಿದ್ದಾರೆ.
ಇನ್ನೊಂಡೆದೆ ಡಿಕೆಶಿಗೆ ಆಸ್ಪತ್ರೆಯೋ ಜಾಮೀನೋ ಎಂಬುದು ವೈದ್ಯರ ವರದಿಯ ನಂತರ ನಿರ್ಧಾರವಾಗಲಿದೆ. ವೈದ್ಯರು ಆರೋಗ್ಯ ಸ್ಥಿರ ಎಂದು ದೃಢಪಡಿಸಿದರೆ ಡಿಕೆಶಿ ಜೈಲು ಸೇರಲಿದ್ದಾರೆ. ಆರೋಗ್ಯ ತೊಂದರೆ ವಿಚಾರ ದೃಢಪಟ್ಟರೆ ಆರ್ಎಂಎಲ್ ಆಸ್ಪತ್ರೆಯಲ್ಲಿ ಅವರು ಚಿಕಿತ್ಸೆಗೊಳಪಡಲಿದ್ದಾರೆ. ಹೀಗಾಗಿ ಈಗಾಗಲೇ ಆಸ್ಪತ್ರೆಯ ಸುತ್ತಲೂ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಕಲ್ಪಿಸಲಾಗಿದೆ.