ನವದೆಹಲಿ: ರಾಷ್ಟ್ರ ರಾಜಧಾನಿ ವಿಧಾನಸಭೆ ಚುನಾವಣೆಗೆ ಕ್ಷಣಗಣನೆ ಆರಂಭವಾಗಿದ್ದು, ಚುನಾವಣಾ ಆಯೋಗದಿಂದ ಮತದಾನಕ್ಕೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ.
ನಾಳೆ ನಡೆಯಲಿರುವ ಚುನಾವಣೆಯ ಅಂಕಿಅಂಶಗಳ ಕಡೆ ನೋಡುವುದಾದ್ರೆ ನವದೆಹಲಿಯ ಒಟ್ಟು 70 ಸ್ಥಾನಗಳ ಪೈಕಿ 672 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಈ ಪೈಕಿ 79 ಮಹಿಳಾ ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ.
![Delhi Assembly Polls 2020:ಪ್ರಮುಖ ಅಂಕಿ ಅಂಶಗಳು](https://etvbharatimages.akamaized.net/etvbharat/prod-images/5996053_poll.jpg)
ಮತದಾನಕ್ಕಾಗಿ 13 ಸಾವಿರದ 752 ಮತಗಟ್ಟೆ ಕೇಂದ್ರಗಳನ್ನ ಸ್ಥಾಪಿಸಲಾಗಿದ್ದು, 34 ಸಾವಿರದ 222 ಮತಯಂತ್ರ ಮತ್ತು 18 ಸಾವಿರದ 765 ನಿಯಂತ್ರಣ ಪೆಟ್ಟಿಗೆ ಮತ್ತು 20 ಸಾವಿರದ 385 ವಿವಿ ಪ್ಯಾಟ್ಗಳನ್ನ ಚುನಾವಣೆಗೆ ಬಳಕೆ ಮಾಡಲಾಗುತ್ತಿದೆ. ಈಗಾಗಲೇ 100 ರಷ್ಟು ವಿದ್ಯುನ್ಮಾನ ಚುನಾವಣಾ ಗುರುತಿನ ಚೀಟಿಗಳನ್ನು ವಿತರಣೆ ಮಾಡಲಾಗಿದ್ದು, ಒಟ್ಟು 1 ಕೋಟಿ 47 ಲಕ್ಷದ 86 ಸಾವಿರದ 382 ಮತದಾರರಿದ್ದಾರೆ.
70 ಕ್ಷೇತ್ರದಲ್ಲೂ ಎಎಪಿ ಅಭ್ಯರ್ಥಿಗಳು ಸ್ಪರ್ಧಿಸಿದ್ದರೆ, ಬಿಎಸ್ಪಿ 68, ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳು 66 ಕ್ಷೇತ್ರದಲ್ಲಿ ಸ್ಪರ್ಧಿಸಿವೆ. 2015ರ ವಿಧಾನಸಭೆ ಚುನಾವಣೆಯಲ್ಲಿ ಎಎಪಿ 70 ಕ್ಷೇತ್ರಗಳಲ್ಲಿ 67 ಸ್ಥಾನ ಗೆದ್ದಿದ್ದರೆ, ಬಿಜೆಪಿ ಕೇವಲ ಮೂರು ಕ್ಷೇತ್ರದಲ್ಲಿ ಜಯ ಸಾಧಿಸಿತ್ತು. ಕಾಂಗ್ರೆಸ್ ಮಾತ್ರ ಒಂದು ಕ್ಷೇತ್ರವನ್ನೂ ಗೆಲ್ಲಲು ಸಾಧ್ಯವಾಗಿರಲಿಲ್ಲ.
ಚುನಾವಣೆಯಲ್ಲಿ ಎಎಪಿ, ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳ ನಡುವೆ ಭಾರಿ ಪೈಪೋಟಿ ಇದ್ದು, ಫೆಬ್ರವರಿ 11ಕ್ಕೆ ಫಲಿತಾಂಶ ಹೊರಬೀಳಲಿದೆ.