ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿ ವಿಧಾನಸಭೆಗೆ ಫೆಬ್ರವರಿ 8ರಂದು ಮತದಾನ ನಡೆಯಲಿದ್ದು, ಫೆ. 11ರಂದು ಫಲಿತಾಂಶ ಹೊರಬೀಳಲಿದೆ ಎಂದು ಕೇಂದ್ರ ಚುನಾವಣಾ ಆಯೋಗದ ಮುಖ್ಯಸ್ಥ ಸುನೀಲ್ ಅರೋರ್ ತಿಳಿಸಿದರು. ಇವತ್ತಿನಿಂದಲೇ ನೀತಿ ಸಂಹಿತೆ ಜಾರಿಯಲ್ಲಿರುತ್ತದೆ ಎಂದು ಹೇಳಿದ್ದಾರೆ.
ದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, 70 ವಿಧಾನಸಭಾ ಕ್ಷೇತ್ರಗಳನ್ನೊಳಗೊಂಡಿರುವ ದೆಹಲಿ ವಿಧಾನಸಭೆಯ ಸದ್ಯದ ಆಡಳಿತ ಅವಧಿ ಫೆ.22ರಂದು ಮುಕ್ತಾಯಗೊಳ್ಳಲಿರುವ ಕಾರಣ ಚುನಾವಣೆ ಘೋಷಣೆಯಾಗಿದೆ. 2015ರಲ್ಲಿ ನಡೆದಿದ್ದ ಚುನಾವಣೆಯಲ್ಲಿ ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷ ಬರೋಬ್ಬರಿ 67 ಕ್ಷೇತ್ರಗಳಲ್ಲಿ ಗೆಲುವು ದಾಖಲು ಮಾಡಿ ಸರ್ಕಾರ ರಚನೆ ಮಾಡಿತ್ತು. ಉಳಿದ ಮೂರು ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ದಾಖಲು ಮಾಡಿತ್ತು.
![Delhi Assembly elections](https://etvbharatimages.akamaized.net/etvbharat/prod-images/5613982_thgumbnail_2x1_wdfdfdf.jpg)
ಮಹತ್ವದ ದಿನಾಂಕಗಳು
- ಜನವರಿ 14 ಚುನಾವಣೆಗೆ ಅಧಿಸೂಚನೆ
- ನಾಮಪತ್ರ ಸಲ್ಲಿಕೆಗೆ ಜನವರಿ 21 ಕೊನೆ ದಿನ
- ಜನವರಿ 22ರಂದು ನಾಮಪತ್ರ ಪರಿಶೀಲನೆ
- ನಾಮಪತ್ರ ವಾಪಸ್ ಪಡೆಯಲು ಜನವರಿ 24
- ಮತದಾನದ ದಿನಾಂಕ ಫೆಬ್ರವರಿ 08
- ಮತದಾನದ ಫಲಿತಾಂಶ ಫೆಬ್ರವರಿ 11
ಒಟ್ಟು 13,750 ಬೂತ್ಗಳಲ್ಲಿ ಚುನಾವಣೆ ನಡೆಯಲಿದ್ದು, 1,46,92,136 ಮತದಾರರು ತಮ್ಮ ಹಕ್ಕು ಚಲಾವಣೆ ಮಾಡಲಿದ್ದಾರೆ. ಇದರಲ್ಲಿ 80.55 ಲಕ್ಷ ಪುರುಷರು ಹಾಗೂ 66.35 ಲಕ್ಷ ಮಹಿಳಾ ಮತದಾರರು ಇದ್ದಾರೆ.