ನವದೆಹಲಿ: ಬೇಸಿಗೆಯ ಬಳಿಕ ರಾಷ್ಟ್ರ ರಾಜಧಾನಿಯ ಗಾಳಿಯ ಗುಣಮಟ್ಟ ಕುಸಿತದ ಹಾದಿಯಲ್ಲೇ ಸಾಗಿದೆ. ಪರಿಣಾಮ ದೆಹಲಿ ನಿವಾಸಿಗಳು ಕಳಪೆ ಗಾಳಿಯನ್ನೇ ಉಸಿರಾಡುವಂತಾಗಿದೆ.
ಗುರುಗ್ರಾಮ, ಫರೀದಾಬಾದ್, ನೋಯ್ಡಾ ಹಾಗೂ ಗಾಜಿಯಾಬಾದ್ ಪ್ರದೇಶಗಳಲ್ಲಿ ಗಾಳಿಯ ಗುಣಮಟ್ಟ ಕಳಪೆಯಾಗಿದೆ ಎಂದು ವಾಯು ಗುಣಮಟ್ಟ ಸೂಚ್ಯಂಕ ಹೇಳಿದೆ.
ಇಂದು ಮುಂಜಾನೆ ದೆಹಲಿಯ ವಿವಿಧೆಡೆ ಗಾಳಿಯ ಗುಣಮಟ್ಟ 252ರ ಅಸುಪಾಸಿನಲ್ಲಿತ್ತು. ಈ ಗುಣಮಟ್ಟ 200 ಗಡಿ ದಾಟಿದೆ ಎಂದರೆ ಅಂತಹ ಗಾಳಿ ಉಸಿರಾಟಕ್ಕೆ ಯೋಗ್ಯವಲ್ಲ ಎಂದು ಸೂಚ್ಯಂಕ ಹೇಳುತ್ತದೆ.
ದೀಪಾವಳಿ ಹಬ್ಬವೂ ಸಮೀಪದಲ್ಲೇ ಇರುವುದರಿಂದ ಈ ಪ್ರಮಾಣ ಮತ್ತಷ್ಟು ಕುಸಿತವಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಕಳೆದ ವರ್ಷ ಇಂಥದ್ದೇ ಪರಿಸ್ಥಿತಿ ನಿರ್ಮಾಣವಾದಾಗ ವಾಯುಮಾಲಿನ್ಯಕ್ಕೆ ಕಾರಣವಾಗುವ ಪಟಾಕಿ ಸಿಡಿಸುವುದನ್ನು ನಿಷೇಧಿಸಿ, ಪರಿಸರ ಸ್ನೇಹಿ ಪಟಾಕಿಗೆ ಅನುಮತಿಸಿ ಸುಪ್ರೀಂಕೋರ್ಟ್ ಆದೇಶಿಸಿತ್ತು.
ಕಾರಣವೇನು?
ಪಕ್ಕದ ಹರಿಯಾಣ, ಪಂಜಾಬ್ ರಾಜ್ಯಗಳಲ್ಲಿ ಬೆಳೆ ಕಟಾವು ಮಾಡಿದ ನಂತರ ರೈತರು ಜಮೀನಿನಲ್ಲಿರುವ ಭತ್ತದ ಒಣ ಹುಲ್ಲನ್ನು ಸುಡುತ್ತಿದ್ದಾರೆ. ಕಳೆದ ಕೆಲ ದಿನಗಳಿಂದ ಈ ರೀತಿ ಕಸವನ್ನು ರಾಶಿ ಹಾಕಿ ಸುಡುವ ಪ್ರಮಾಣ ಹೆಚ್ಚಾದ ಪರಿಣಾಮ ನವದೆಹಲಿಯಲ್ಲಿ ವಾಯುಮಾಲಿನ್ಯ ಉಂಟಾಗಿದೆ.
ವಾಯು ಗುಣಮಟ್ಟ ಸೂಚ್ಯಂಕ:
- 0 - 50 - ಉತ್ತಮ
- 51 - 100 - ತೃಪ್ತಿದಾಯಕ
- 101 - 200 - ಸಾಧಾರಣ
- 201 - 300 - ಕಳಪೆ
- 301 - 400 - ಅತ್ಯಂತ ಕಳಪೆ
- 401 - 500 - ಅಪಾಯಕಾರಿ