ಸಾಮಾಜಿಕ ಜಾಲತಾಣಗಳಲ್ಲಿ ನ್ಯಾಯಾಧೀಶರ ವಿರುದ್ಧ ಟೀಕೆ ಮಾಡಿದ್ದಕ್ಕೆ, ಆಂಧ್ರ ಪ್ರದೇಶದ ಸರ್ಕಾರದ ವಿರುದ್ಧ ಆಂಧ್ರ ಹೈಕೋರ್ಟ್ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದೆ. ನಾವು ಸತತವಾಗಿ ದಾಳಿಗೆ ಒಳಗಾಗುತ್ತಿದ್ದೇವೆ. ಸ್ಪೀಕರ್ ಮತ್ತು ಉಪಮುಖ್ಯಮಂತ್ರಿಗಳು ಕೂಡ ನ್ಯಾಯಾಂಗದ ವಿರುದ್ಧ ಆರೋಪಗಳನ್ನು ಮಾಡುತ್ತಿದ್ದಾರೆ. ನೀವೇನು ನ್ಯಾಯಾಂಗದ ವಿರುದ್ಧ ಯುದ್ಧ ಘೋಷಿಸಿದ್ದೀರ..? ಎಂದು ಪ್ರಶ್ನಿಸಿದೆ.
ಹೈಕೋರ್ಟ್ ನ್ಯಾಯಾಧೀಶರ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಟೀಕೆ ಮಾಡಿರುವುದಕ್ಕೆ ಹೈಕೋರ್ಟ್ ಕೆಂಡಾಮಂಡಲವಾಗಿದೆ. ನೀವು ನ್ಯಾಯಾಂಗದ ಮೇಲೆ ಯುದ್ಧ ಘೋಷಿಸಿದ್ದೀರ ಎಂದು ಪ್ರಶ್ನಿಸಿದೆ. ಸ್ಪೀಕರ್ ತಮ್ಮಿನೆನಿ ಸೀತಾರಾಮ್, ಉಪಮುಖ್ಯಮಂತ್ರಿ ನಾರಾಯಣಸ್ವಾಮಿ, ಸಂಸದರಾದ ವಿಜಯಸೈರೆಡ್ಡಿ, ನಂದಿಗಂ ಸುರೇಶ್, ಮತ್ತು ಮಾಜಿ ಶಾಸಕ ಆಂಚಿ ಕೃಷ್ಣಮೋಹನ್ ಮಾಡಿರುವ ಟೀಕೆಗಳು ಆಕ್ಷೇಪಾರ್ಹವಾಗಿದೆ. ಯಾಕೆ ಅವರ ವಿರುದ್ಧ ಯಾಕೆ ಪ್ರಕರಣ ದಾಖಲಾಗಿಲ್ಲ ಎಂದು ಪ್ರಶ್ನಿಸಿದೆ. ನ್ಯಾಯಾಧೀಶರ ವಿರುದ್ಧದ ಟೀಕೆಗಳು ಪ್ರಜಾಪ್ರಭುತ್ವಕ್ಕೆ ವಿರುದ್ಧವಾಗಿದೆ ಮತ್ತು ನ್ಯಾಯಾಂಗದ ಮೇಲಿನ ದಾಳಿಯಾಗಿದೆ ಎಂದು ಹೇಳಿದೆ.
ನಾವು ಸಹಿಸುವುದಿಲ್ಲ :
ಸಾಮಾಜಿಕ ಜಾಲತಾಣಗಳಲ್ಲಿ ನ್ಯಾಯಾಂಗದ ವಿರುದ್ಧ ಪೋಸ್ಟ್ ಹಾಕುವ ಬಗ್ಗೆ ಹೈಕೋರ್ಟ್ ಸ್ವಯಂ ಕೈಗೆತ್ತಿಕೊಂಡ ಅರ್ಜಿ ವಿಚಾರಣೆ, ನ್ಯಾಯಮೂರ್ತಿಗಳಾದ ರಾಕೇಶ್ ಕುಮಾರ್ ಮತ್ತು ಉಮಾದೇವಿ ಅವರಿದ್ದ ಪೀಠದಲ್ಲಿ ನಡೆಯಿತು. ನ್ಯಾಯಾಂಗದ ಘನೆತೆಗೆ ದಕ್ಕೆ ತರುವ ಯಾರನ್ನೂ ನಾವು ಸಹಿಸುವುದಿಲ್ಲ ಎಂದು ಹೈಕೋರ್ಟ್ ಈ ವೇಳೆ ಮತ್ತೊಮ್ಮೆ ಸ್ಪಷ್ಟಪಡಿಸಿದೆ.
ಇದೇ ವೇಳೆ ಸಿಐಡಿಯ ಕಾರ್ಯವೈಖರಿಯ ಬಗ್ಗೆಯೂ ಹೈಕೋರ್ಟ್ ಅಸಮಧಾನ ವ್ಯಕ್ತಪಡಿಸಿದೆ. ನ್ಯಾಯಾಧೀಶರ ವಿರುದ್ಧದ ಟೀಕೆಗೆ ಸಂಬಂಧಿಸಿದಂತೆ ಹೈಕೋರ್ಟ್ ರಿಜಿಸ್ಟ್ರಾರ್ ಸ್ವತಃ ದೂರು ದಾಖಲಿಸಿದ್ದರೂ, ಸಿಐಡಿ ಯಾವುದೇ ಕ್ರಮಕೈಗೊಂಡಿಲ್ಲ ಎಂದಿದೆ.
ನೀವು ನಾಯಕರನ್ನು ರಕ್ಷಿಸುತ್ತಿದ್ದೀರಾ..? :
ಸರ್ಕಾರ ವಿರುದ್ಧ ಟೀಕೆ ಮಾಡಿದರೆ ಪೊಲೀಸರು ಪ್ರಕರಣದ ದಾಖಲಿಸುತ್ತಾರೆ, ನ್ಯಾಯಾಲಯ ಮತ್ತು ನ್ಯಾಯಾಧೀಶರ ವಿರುದ್ಧ ಟೀಕೆ ಮಾಡಿದರೆ ಯಾಕೆ ಪ್ರಕರಣ ದಾಖಲಿಸಿಲ್ಲ ಎಂದು ಹೈಕೋರ್ಟ್ ಪ್ರಶ್ನಿಸಿತು. ನೀವು ನಾಯಕರ ವಿರುದ್ಧ ಪ್ರಕರಣ ದಾಖಲಿಸದೆ ಅವರನ್ನು ರಕ್ಷಿಸುತ್ತಿದ್ದಾರ ಎಂದು ನಮಗನಿಸುತ್ತಿದೆ ಎಂದು ಹೇಳಿತು.
ಸಿಐಡಿ ವಿಫಲವಾದರೆ ಸಿಬಿಐ ತನಿಖೆ :
ಸಿಐಡಿ ಪ್ರಕರಣವನ್ನು ತನಿಖೆ ಮಾಡಲು ವಿಫಲವಾದರೆ, ಸಿಬಿಐಗೆ ವಹಿಸುತ್ತೇವೆ ಎಂದು ಕೋರ್ಟ್ ಹೇಳಿತು. ಸಿಬಿಐಗೆ ವಹಿಸುವುದಕ್ಕೆ ನಮ್ಮ ಅಭ್ಯಂತರವಿಲ್ಲ ಎಂದು ಅಡ್ವಕೇಟ್ ಜನರಲ್ ಶ್ರೀರಾಮ್ ಉತ್ತರಿಸಿದರು.
ಈ ಹಿಂದೆಯೂ ಹೀಗೆಂದಿತ್ತು ಕೋರ್ಟ್:
ಹೈಕೋರ್ಟ್ ಇಷ್ಟೊಂದು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದು, ಇದೇ ಮೊದಲೇನಲ್ಲ. ಅಕ್ಟೋಬರ್ 1 ರಂದು ಇದೇ ಪ್ರಕರಣದ ವಿಚಾರಣೆ ವೇಳೆ ಕೆಂಡಾಮಂಡಲವಾಗಿದ್ದ ಕೋರ್ಟ್, ನಿಮಗೆ ನ್ಯಾಯಾಂಗದ ಮೇಲೆ ನಂಬಿಕೆ ಇಲ್ಲದಿದ್ದರೆ, ಸಂಸತ್ಗೆ ಹೋಗಿ ಆಂಧ್ರ ಪ್ರದೇಶ ಹೈಕೋರ್ಟ್ನ್ನು ಮುಚ್ಚುವಂತೆ ಹೇಳಿ ಎಂದಿತ್ತು.
ಹೈಕೋರ್ಟ್ ನ್ಯಾಯಾಧೀಶರ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಟೀಕೆಗಳು ಕೇಳಿ ಬಂದಾಗ, ಸ್ವಯಂ ಪ್ರೇರಿತವಾಗಿ ವಿಚಾರಣೆ ಕೈಗೆತ್ತಿಕೊಂಡ ಹೈಕೋರ್ಟ್, ಪ್ರಕರಣದ ತನಿಖೆ ನಡೆಸುವಂತೆ ಸಿಐಡಿಗೆ ಸೂಚಿಸಿತ್ತು. ಸಿಐಡಿ ಈಗಾಗಲೇ ನ್ಯಾಯಧೀಶರ ವಿರುದ್ಧ ಟೀಕೆ ಮಾಡಿದ 90 ಜನರಿಗೆ ನೋಟಿಸ್ ನೀಡಿದೆ. ಕೆಲ ಸಾಮಾಜಿಕ ಜಾಲತಾಣ ಸಂಸ್ಥೆಗಳಿಗೂ ಕೋರ್ಟ್ ನೋಟಿಸ್ ನೀಡಿದೆ.