ಕಾಠ್ಮಂಡು (ನೇಪಾಳ): ಭಾರೀ ಮಳೆಯಿಂದ ಉಂಟಾಗಿರುವ ಪ್ರವಾಹ ಹಾಗೂ ಭೂ ಕುಸಿತಕ್ಕೆ ಸಿಲುಕಿ ಬುಧವಾರ ಪಶ್ಚಿಮ ನೇಪಾಳದ ಲ್ಯಾಮ್ಜಂಗ್ ಜಿಲ್ಲೆಯಲ್ಲಿ ನಾಲ್ಕು ಮಂದಿ ಮೃತಪಟ್ಟಿದ್ದು, ಏಳು ಮಂದಿ ನಾಪತ್ತೆಯಾಗಿದ್ದಾರೆ. ಕುಂಭದ್ರೋಣ ಮಳೆ ಇದುವರೆಗೆ 108 ಮಂದಿಯನ್ನು ಆಹುತಿ ತೆಗೆದುಕೊಂಡಿದೆ.
ಕಳೆದ ಎರಡು ವಾರಗಳಿಂದ ಎಡಬಿಡದೆ ಧಾರಾಕಾರ ಮಳೆ ಸುರಿಯುತ್ತಿದೆ. ಇಲ್ಲಿಯವರೆಗೂ 33 ಮಂದಿ ನಾಪತ್ತೆಯಾಗಿದ್ದಾರೆ. ಇದಲ್ಲದೆ ಬುಧವಾರ ಸಂಭವಿಸಿದ ಪ್ರವಾಹದಿಂದ 9 ಮಂದಿ ಗಾಯಗೊಂಡಿದ್ದಾರೆ. ಇಲ್ಲಿನ ಜಲವಿದ್ಯುತ್ ಸ್ಥಾವರ ಕೇಂದ್ರದ ಮೂಲ ಸೌಕರ್ಯಗಳೂ ಹಾಳಾಗಿವೆ. ಸತ್ತಿರುವವರು ಈ ಸ್ಥಾವರದಲ್ಲಿ ಕಾರ್ಯ ನಿರ್ವಹಿಸುತ್ತಿದ್ದವರು ಎನ್ನಲಾಗಿದೆ ಎಂದು ಗೃಹ ಸಚಿವಾಲಯ ಹೇಳಿದೆ.
ನೇಪಾಳ ಪೊಲೀಸ್ ಪಡೆ (ಎನ್ಪಿಎಫ್) ಮತ್ತು ಯೋಧರು ಪ್ರವಾಹಕ್ಕೆ ಸಿಲುಕಿದವರನ್ನು ಜಂಟಿ ಕಾರ್ಯಾಚರಣೆ ನಡೆಸಿ ರಕ್ಷಣೆ ಮಾಡುತ್ತಿದ್ದಾರೆ. ಈ ಕಾರ್ಯಾಚರಣೆಗೆ ಸ್ಥಳೀಯರು ಕೈಜೋಡಿಸಿದ್ದಾರೆ. ಜುಲೈ 11ರಿಂದ ಆರಂಭವಾದ ಮಳೆಗೆ 35 ಜಿಲ್ಲೆಗಳು ಮುಳುಗಿದ್ದು, ಇದರಿಂದ ಜನಜೀವನ ಅಸ್ತವ್ಯಸ್ತಗೊಂಡಿದೆ.
ಪರಿಸರದ ನೈರ್ಮಲ್ಯತೆ ಸಂಪೂರ್ಣ ಹಾಳಾಗಿರುವ ಕಾರಣ ಸಾಂಕ್ರಾಮಿಕ ರೋಗಗಳು ಹರಡುತ್ತಿವೆ. ಇದರಿಂದ ಜನರಲ್ಲಿ ಭಯ ಹೆಚ್ಚಾಗಿದೆ. ವಿದೇಶಿ ನೆರವು ಪಡೆಯದಿರಲು ನಿರ್ಧರಿಸಿರುವ ಸರ್ಕಾರ, ರಕ್ಷಣಾ ಮತ್ತು ಪರಿಹಾರ ಕಾರ್ಯಗಳನ್ನು ತ್ವರಿತವಾಗಿ ಇತ್ಯರ್ಥಗೊಳಿಸಲು ಸ್ಥಳೀಯ ಸಂಸ್ಥೆಗಳಿಗೆ ನಿರ್ದೇಶನ ನೀಡಿದೆ.