ಮಿರ್ಜಾಪುರ (ಉತ್ತರಪ್ರದೇಶ) : 15 ವರ್ಷಗಳ ಸುದೀರ್ಘ ಹೋರಾಟದ ನಂತರ ಸತ್ತ ವ್ಯಕ್ತಿ ಜೀವಂತ ಇದ್ದಾನೆ ಎಂದು ಸರ್ಕಾರದಿಂದ ಅಧೀಕೃತವಾಗಿ ಕಾಗದ ಪತ್ರಗಳನ್ನು ನೀಡಲಾಗಿದೆ.
ಸತ್ತವರು ಹೇಗೆ ಬದುಕಿ ಬಂದ್ರು ಅಂತಾ ಆಶ್ಚರ್ಯ ಚಕಿತರಾಗಬೇಡಿ. ಸರ್ಕಾರ ಮಾಡಿದ ಯಡವಟ್ಟಿಗೆ ವ್ಯಕ್ತಿಯೋರ್ವ ಸತತ 15 ವರ್ಷಗಳ ಹೋರಾಟ ನಡೆಸಿ ತಾನು ಬದುಕಿದ್ದೇನೆ ಎಂದು ದೃಢಪಡಿಸಿಕೊಂಡಿದ್ದಾನೆ.
65 ವರ್ಷದ ವ್ಯಕ್ತಿಯನ್ನು ಅಂತಿಮವಾಗಿ ಉತ್ತರಪ್ರದೇಶದ ಮಿರ್ಜಾಪುರ ಜಿಲ್ಲಾಡಳಿ ಜೀವಂತವಾಗಿದ್ದಾನೆ ಎಂದು ಘೋಷಣೆ ಮಾಡಿದೆ. ಕಳೆದ 15 ವರ್ಷಗಳಿಂದ ತನ್ನನ್ನು ತಾನು ಜೀವಂತ ವ್ಯಕ್ತಿ ಎಂದು ಸಾಬೀತುಪಡಿಸಲು ಹೆಣಗಾಡುತ್ತಿದ್ದವರೇ ಭೋಲಾ ಸಿಂಗ್. ಸರ್ಕಾರಿ ದಾಖಲೆಗಳಲ್ಲಿ ಅವರ ಹೆಸರನ್ನು ಸೇರಿಸಿದ ನಂತರ ಅಂತಿಮವಾಗಿ ಪ್ರಮಾಣಪತ್ರವನ್ನು ನೀಡಲಾಗಿದೆ.
ಜಮೀನು ವ್ಯಾಜ್ಯಕ್ಕೆ ಸಂಬಂಧಿಸಿದಂತೆ ಸಿಂಗ್‌ರ ತಮ್ಮ ರಾಜ್ ನಾರಾಯಣ್ ಕಂದಾಯ ಅಧಿಕಾರಿಗಳೊಂದಿಗೆ ಸೇರಿ ನಮ್ಮ ಸಹೋದರ ಸತ್ತಿದ್ದಾನೆ ಎಂದು 2005ರಲ್ಲಿ ಮರಣ ಪತ್ರ ಮಾಡಿಸಿಬಿಟ್ಟಿದ್ದ. ಈ ಸಹೋದರ ಮಾಡಿದ ಯಡವಟ್ಟಿಗೆ ಭೋಲಾ ತಾನು ಜೀವಂತ ವ್ಯಕ್ತಿ ಎಂದು ಸಾಬೀತುಪಡಿಸಲು ಕಾನೂನು ಹೋರಾಟವನ್ನು ಪ್ರಾರಂಭಿಸಿದ.
ಘಟನೆ ಸಂಬಂಧ ಸರ್ಕಾರಿ ಅಧಿಕಾರಿಗಳು ಯಾವುದೇ ಪ್ರತಿಕ್ರಿಯೆ ನೀಡುತ್ತಿರಲಿಲ್ಲ. ಹೀಗಾಗಿ ಅಂತಿಮವಾಗಿ ಜನವರಿ 21 ರಂದು ಡಿಎಂ ಕಚೇರಿಯ ಮುಂದೆ "ಸರ್, ನಾನು ಜೀವಂತವಾಗಿದ್ದೇನೆ" ಎಂದು ಬರೆದ ಬ್ಯಾನರ್‌ನೊಂದಿಗೆ ಪ್ರತಿಭಟಿಸಲು ಮುಂದಾದರು. ಭೋಲಾ ಅವರ ಪ್ರಕರಣವನ್ನು ಮಾಧ್ಯಮಗಳು ವರದಿ ಮಾಡಿದ ನಂತರ ಎಚ್ಚೆತ್ತ ಮುಖ್ಯಮಂತ್ರಿ ಕಚೇರಿ ಇದಕ್ಕೆ ಸಂಬಂಧಿಸಿದಂತೆ ಕ್ರಮ ಕೈಗೊಳ್ಳುವಂತೆ ಜಿಲ್ಲಾಡಳಿತಕ್ಕೆ ನಿರ್ದೇಶನ ನೀಡಿತು. ಇದರನ್ವಯ ಡಿಎಂ ಪ್ರವೀಣ್ ಕುಮಾರ್ ಲಕ್ಷ್ಕರ್ ಅವರು ಇಬ್ಬರು ಸಹೋದರರ ಡಿಎನ್ಎ ಪರೀಕ್ಷೆಗೆ ಆದೇಶಿಸಿದರು.
ಭೋಲಾ ತನ್ನ ರಕ್ತವನ್ನು ಡಿಎನ್‌ಎ ಪರೀಕ್ಷೆಗಾಗಿ ಜಿಲ್ಲಾ ಆಸ್ಪತ್ರೆಗೆ ನೀಡಿದರೆ, ಅವರ ಸಹೋದರ ರಾಜ್ ನಾರಾಯಣ್ ರಕ್ತ ನೀಡಲು ನಿರಾಕರಿಸಿದರು. ಇದು ಜಿಲ್ಲಾಡಳಿತದ ಬಗ್ಗೆ ಆಳವಾದ ತನಿಖೆ ನಡೆಸಲು ಕಾರಣವಾಯಿತು. 2016ರಲ್ಲಿ ಭೋಲಾ ಅವರ ಸಹೋದರ ಮತ್ತು ಇತರ ಇಬ್ಬರು ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಾಗಿದ್ದು, ಅವರನ್ನು ಈ ಪ್ರಕರಣದಲ್ಲಿ ಆರೋಪಿಗಳನ್ನಾಗಿ ಮಾಡಲಾಗಿದೆ. ಇದು ಇನ್ನೂ ವಿಚಾರಣೆ ಹಂತದಲ್ಲಿದೆ.